ಬೆಂಗಳೂರು: ಮಂಜುನಾಥ ಜಿ. ಹೆಗಡೆ ಸಂಯೋಜಕರಾಗಿರುವ ರಾಜ್ಯ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹೊಸ ಸಂಸತ್ ಭವನ, ಸಾಂಸ್ಕೃತಿಕ ನಾಯಕ ಬಸವೇಶ್ವರ ಎಂಬ ವಿವರ ಸೇರಿದಂತೆ ಪ್ರಚಲಿತ ವಿದ್ಯಮಾನಗಳನ್ನೂ 2024–25ನೇ ಸಾಲಿನ ಪಠ್ಯಕ್ಕೆ ಸೇರ್ಪಡೆ ಮಾಡಿದೆ.
10ನೇ ತರಗತಿಯ ಭೂಗೋಳದಲ್ಲಿ ಇದುವರೆಗೂ ಇದ್ದ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣದ ಮಾಹಿತಿಯ ಜತೆಗೆ ಮೆಟ್ರೊ ರೈಲು ಮಾಹಿತಿ, ಈಗಷ್ಟೇ ಮರಣೋತ್ತರವಾಗಿ ‘ಭಾರತ ರತ್ನ’ ಪುರಸ್ಕೃತರಾದ ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥ್ ಕುರಿತ ಮಾಹಿತಿ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಈಚೆಗೆ ಮಹಿಳಾ ಮೀಸಲಾತಿಗಾಗಿ ರೂಪಿಸಿದ ‘ನಾರಿಶಕ್ತಿ ವಂದನಾ’ ಕಾಯ್ದೆ, ಬ್ಯಾಂಕ್‌ಗಳ ವಿಲೀನ, ಲಿಂಗತ್ವ ಅಲ್ಪಸಂಖ್ಯಾತರ ಮಾಹಿತಿ, ಪೋಕ್ಸೊ ಕಾಯ್ದೆಯ ವಿವರವನ್ನು 10ನೇ ತರಗತಿಯ ರಾಜ್ಯಶಾಸ್ತ್ರದಲ್ಲಿ ಅಳವಡಿಸಲಾಗಿದೆ. ಮಹಿಳಾ ದಿನಾಚರಣೆ ಪಾಠದಲ್ಲಿ ಹಲವು ಸಾಧಕ ಮಹಿಳೆಯರನ್ನು ಪರಿಚಯಿಸಲಾಗಿದೆ.
6ನೇ ತರಗತಿಯಿಂದ 10ನೇ ತರಗತಿವರೆಗಿನ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಕಳೆದ ಸೆಪ್ಟೆಂಬರ್‌ನಲ್ಲಿ ಐದು ಸಮಿತಿಗಳನ್ನು ರಚಿಸಲಾಗಿತ್ತು. ಕನ್ನಡ ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆ, 6, 7ನೇ ತರಗತಿಯ ಸಮಾಜ ವಿಜ್ಞಾನ ಹಾಗೂ 8,9, 10ನೇ ತರಗತಿಯ ಸಮಾಜ ವಿಜ್ಞಾನಕ್ಕೆ ಪ್ರತ್ಯೇಕವಾಗಿ ಸಮಿತಿಗಳನ್ನು ರಚಿಸಲಾಗಿತ್ತು. ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಅವಧಿಯ ಒಳಗೆ ಮಧ್ಯಂತರ ವರದಿ ನೀಡಿದ ನಂತರ ಮತ್ತೆ ಎರಡು ತಿಂಗಳು ಅವಧಿ ವಿಸ್ತರಿಸಲಾಗಿತ್ತು.
ಹಿಂದಿನ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿದ್ದ ಪಾಠಗಳು ಹಾಗೂ ಕೆಲ ಅಂಶಗಳನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದು, ಬರಗೂರು ರಾಮಚಂದ್ರಪ್ಪ ಸಮಿತಿ ರೂಪಿಸಿದ್ದ ಹಳೆಯ ಪಠ್ಯಗಳನ್ನೇ ಮುಂದುವರಿಸಿತ್ತು. ಕರ್ನಾಟಕ ಪಠ್ಯಪುಸ್ತಕ ಸಂಘ ಇದೇ ಶೈಕ್ಷಣಿಕ ಸಾಲಿನಲ್ಲಿ ಕೈಬಿಟ್ಟ–ಸೇರಿಸಿದ ಪಾಠಗಳು, ತಿದ್ದುಪಡಿ ಮಾಡಿದ ಅಂಶಗಳನ್ನು ಹಾಗೆ ಉಳಿಸಿಕೊಂಡಿರುವ ಸಮಿತಿ ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟುಗಳಿಗೆ ಅನುಗುಣವಾಗಿ, ಮೂಲ ಸ್ವರೂಪ ಬದಲಾಗದಂತೆ ಒಂದಷ್ಟು ಸಣ್ಣ ಬದಲಾವಣೆಗಳನ್ನು ಮಾಡಿದೆ.
ವರದಿಯನ್ನು ಸ್ವೀಕರಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಿತಿ ನೀಡಿದ ಕರಡು ಪಠ್ಯಗಳನ್ನು ಮುದ್ರಿಸಲು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಅನುಮತಿ ನೀಡಿದೆ. ಸಮಾಜ ವಿಜ್ಞಾನ ವಿಷಯದ ಪುಸ್ತಕಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಜತೆಗೆ ಉರ್ದು, ತಮಿಳು, ತೆಲುಗು, ಮರಾಠಿ ಹಾಗೂ ಹಿಂದಿಯಲ್ಲೂ ಮುದ್ರಿಸಿ, ವಿತರಿಸಲು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.