ADVERTISEMENT

Cyber Crime | ‘ಭದ್ರತೆ’ಗಾಗಿ ವಿಮೆ ಮಾಡಿಸಿದ್ದವರಿಗೇ ‘ಅಭದ್ರತೆ’

‘ಭದ್ರತೆ’ಗಾಗಿ ವಿಮೆ ಮಾಡಿಸಿದ್ದವರಿಗೇ ‘ಅಭದ್ರತೆ’

ಆದಿತ್ಯ ಕೆ.ಎ
Published 27 ನವೆಂಬರ್ 2023, 20:42 IST
Last Updated 27 ನವೆಂಬರ್ 2023, 20:42 IST
<div class="paragraphs"><p>ಪ್ರಾತಿನಿಧಿಕ ಚಿತ್</p></div>

ಪ್ರಾತಿನಿಧಿಕ ಚಿತ್

   

ಬೆಂಗಳೂರು: ವಿಮೆದಾರರಿಗೆ ಗಾಳ ಹಾಕಿ ವಂಚಿಸುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಇಂಥವರಿಂದ ವಿಮೆದಾರರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವಂತಾಗಿದೆ. ಹಣ ಕಳೆದು ಕೊಂಡವರು ವಿವಿಧ ಸೈಬರ್‌ ಪೊಲೀಸ್‌ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.

ಮಕ್ಕಳ ಶಿಕ್ಷಣ, ಮನೆ ನಿರ್ಮಾಣ, ನಿವೇಶನ ಖರೀದಿ, ವೃದ್ಧಾಪ್ಯದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಜನರು ಹಲವು ಖಾಸಗಿ ಕಂಪನಿಗಳಲ್ಲಿ ವಿವಿಧ ರೀತಿಯ ಪಾಲಿಸಿ ಮಾಡಿಸುತ್ತಾರೆ. ಆ ಪಾಲಿಸಿಗಳ ಅವಧಿ ಮುಕ್ತಾಯವಾದ ವಿಮೆದಾರರನ್ನು ಪತ್ತೆ ಮಾಡಿ ಅವ ರಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ಬರುವುದಾಗಿ ಆಮಿಷವೊಡ್ಡಿ ವಂಚಿಸುವ ಜಾಲ ಸಕ್ರಿಯವಾಗಿದೆ. ಆನ್‌ ಲೈನ್‌ ಮೂಲಕ ಬ್ಯಾಂಕ್‌ ಖಾತೆಗೆ ಕನ್ನ ಹಾಕುತ್ತಿದ್ದ ಆರೋಪಿಗಳು, ಈಗ ವಿಮೆ ಪಾಲಿಸಿದಾರರ ಮೇಲೆ ಕಣ್ಣು ಹಾಕಿದ್ದಾರೆ.

ADVERTISEMENT

‘ಈ ರೀತಿಯ ವಂಚನೆಯಲ್ಲಿ ಸುಶಿಕ್ಷಿತರೇ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ’ ಎಂದು ಸೈಬರ್‌ ಠಾಣೆ ಪೊಲೀಸರು ಹೇಳಿದರು.

ಆದಾಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿಯೊಬ್ಬರು ಈ ಜಾಲಕ್ಕೆ ಸಿಲುಕಿ, ₹5 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

‘ನಾಗರಬಾವಿಯಲ್ಲಿ ನೆಲೆಸಿರುವ ನಿವೃತ್ತ ಅಧಿಕಾರಿ, ಆದಿತ್ಯ ಬಿರ್ಲಾ ವಿಮಾ ಕಂಪನಿಯಲ್ಲಿ ವಾರ್ಷಿಕವಾಗಿ ₹50 ಸಾವಿರ ಪಾವತಿಸುವ ಪಾಲಿಸಿ ಮಾಡಿಸಿದ್ದರು. ನವೆಂಬರ್‌ 8ಕ್ಕೆ ವಿಮಾ ಕಂತು ಪಾವತಿ ಅವಧಿ ಮುಕ್ತಾಯವಾಗಿ ಹಣ ವಾಪಸ್ ಪಡೆಯಲು ಮುಂದಾಗಿದ್ದರು. ಅದಕ್ಕಾಗಿ ಕಂಪನಿಯ ಏಜೆಂಟರನ್ನು ಸಂಪರ್ಕಿಸಲು ಗೂಗಲ್‌ನಲ್ಲಿ ಮೊಬೈಲ್‌ ಸಂಖ್ಯೆಗೆ ಹುಡುಕಾಟ ನಡೆಸಿದ್ದರು. ಗೂಗಲ್‌ನಲ್ಲಿ ಸಿಕ್ಕಿದ ಮೊಬೈಲ್‌ ಸಂಖ್ಯೆಗೆ ನಿವೃತ್ತ ಅಧಿಕಾರಿ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ವ್ಯಕ್ತಿ ‘ತಾನು ಆದಿತ್ಯ ಬಿರ್ಲಾ ವಿಮಾ ಸಂಸ್ಥೆಯ ಪ್ರತಿನಿಧಿ’ ಎಂದು ಪರಿಚಯಿಸಿಕೊಂಡಿದ್ದ. ಅದಾದ ಮೇಲೆ ಆರ್‌.ಕೆ.ಮಿಶ್ರಾ ಎಂಬಾತನ ಮೊಬೈಲ್‌ ಸಂಖ್ಯೆ ನೀಡಿ ಕರೆ ಮಾಡುವಂತೆ ತಿಳಿಸಿದ್ದ’

‘ಹೆಚ್ಚು ವಿಮೆ ಮಾಡಿಸಿದ್ದವರೇ ಗುರಿ’
ಬೆಂಗಳೂರಿನಲ್ಲೂ ಸಕ್ರಿಯವಾಗಿರುವ ಈ ಜಾಲ ದೊಡ್ಡ ಮೊತ್ತದ ಪಾಲಿಸಿ ಮಾಡಿಸಿದವರನ್ನೇ ಪತ್ತೆ ಮಾಡುತ್ತಿದೆ. ವಿಮಾ ಸಂಸ್ಥೆಯ ಹೆಸರಿನಲ್ಲೇ ಕರೆ ಮಾಡಿ ಪಾಲಿಸಿಗಿಂತ ಹೆಚ್ಚಿನ ಮೊತ್ತ ನೀಡುವುದಾಗಿ ಆಮಿಷ ಒಡ್ಡಲಾಗುತ್ತಿದೆ. ಶಿಕ್ಷಕರು, ಉದ್ಯಮಿಗಳು, ಸರ್ಕಾರಿ ಇಲಾಖೆ ಅಧಿಕಾರಿಗಳು, ನಿವೃತ್ತ ನೌಕರರನ್ನೇ ಗುರಿಯಾಗಿಸಿ ಈ ತಂಡವು ಸುಲಿಗೆ ಮಾಡುತ್ತಿದೆ ಎಂದು ಮೂಲಗಳು ಹೇಳಿವೆ.

ಶುಲ್ಕದ ನೆಪದಲ್ಲಿ ಹಣ ಸುಲಿಗೆ: ‌‘ಮಿಶ್ರಾ ಎಂಬಾತನ ನಂಬರ್‌ಗೆ ಕರೆ ಮಾಡಿದಾಗ ತಾನು ಮುಂಬೈನ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಪಾಲಿಸಿ ಹಣವನ್ನು ಬಡ್ಡಿ ಸಹಿತ ವಾಪಸ್ ನೀಡುವುದಾಗಿ ಹೇಳಿಕೊಂಡಿದ್ದ. ಬ್ಯಾಂಕ್‌ ಖಾತೆ ಸಂಖ್ಯೆ ಕಳುಹಿಸುವಂತೆ ತಿಳಿಸಿದ್ದ. ಬ್ಯಾಂಕ್‌ ಖಾತೆ ಸಂಖ್ಯೆ ಕಳುಹಿಸಿದ ಮೇಲೆ ಬ್ಯಾಂಕ್‌ ಸಿಬ್ಬಂದಿಯನ್ನು ಸಂಪರ್ಕಿಸಿ ಹಣವಿರು ವುದನ್ನು ಪತ್ತೆ ಮಾಡಿಕೊಂಡಿದ್ದ. ಅದಾದ ಮೇಲೆ ಕರೆ ಮಾಡಿ ಪಾಲಿಸಿಗಿಂತ ಹೆಚ್ಚಿನ ಹಣ ನೀಡುವುದಾಗಿ ಆಸೆ ತೋರಿಸಿದ್ದ. ಅರ್ಜಿ ವಿಲೇವಾರಿ, ಸ್ಟಾಂಪ್‌ ಸ್ಟ್ಯಾಂಪ್‌ ಶುಲ್ಕ, ಸೆಕ್ಯೂರಿಟಿ ಶುಲ್ಕದ ನೆಪದಲ್ಲಿ ಹಂತ ಹಂತವಾಗಿ ₹ 5 ಲಕ್ಷ ವಸೂಲಿ ಮಾಡಿದ್ದ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಐಪಿಸಿ 420 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ವಿಮೆ ಮಾಡಿಸಿದ್ದೆ. ಈಗ ಹಣ ಕಳೆದುಕೊಂಡು ಅಭದ್ರತೆ ಕಾಡುತ್ತಿದೆ. ಕಂಪನಿಯ ಕಚೇರಿಗೆ ತೆರಳಿ ವಿಚಾರಿಸಿದ್ದು, ಕಂಪನಿ ಪ್ರತಿನಿಧಿಗಳು ಸಹ ದೂರು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ರೀತಿ ಯಾರಾದರೂ ಕರೆ ಮಾಡಿದರೆ ಹಣ ನೀಡಬೇಡಿ’ ಎಂದು ಹಣ ಕಳೆದುಕೊಂಡ ನಿವೃತ್ತ ಅಧಿಕಾರಿ ‌ಎಚ್ಚರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.