ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್) ನಡೆದಿರುವ ಅಕ್ರಮದ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಆರೋಪಿಗಳು 30ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ, ನಗದೀಕರಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.
ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವ್ಯಕ್ತಿಯೊಬ್ಬ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಮುಂದುವರಿದಿದೆ ಎಂದು ಸಿಐಡಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
30 ಬ್ಯಾಂಕ್ ಖಾತೆಗಳ ಪೈಕಿ ಎಂಟು ಬ್ಯಾಂಕ್ ಖಾತೆದಾರರನ್ನು ಸಿಐಡಿ ಕಚೇರಿಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಹಲವು ಮಾಹಿತಿಗಳು ಲಭ್ಯವಾಗಿವೆ. ಮೇಲ್ನೋಟಕ್ಕೆ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಹಣದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.
ನಿಗಮದ ಮಾಜಿ ಅಧ್ಯಕ್ಷ ಡಿ.ಎಸ್. ವೀರಯ್ಯ ಅವರ ಖಾತೆಗೆ ಗುತ್ತಿಗೆದಾರರಿಂದ ₹ 3 ಕೋಟಿ ಸಂದಾಯ ಆಗಿರುವುದಕ್ಕೆ ಸಿಐಡಿಗೆ ಪುರಾವೆಗಳು ಸಿಕ್ಕಿದ್ದವು. ಈ ಜಾಡು ಬೆನ್ನುಹತ್ತಿದ್ದ ತನಿಖಾ ತಂಡಕ್ಕೆ ಅನ್ಯ ವ್ಯಕ್ತಿಗಳ ಹಲವು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡು, ಆರೋಪಿಗಳು ಹಣ ಡ್ರಾ ಮಾಡಿರುವುದು ಗೊತ್ತಾಗಿದೆ. ಉಳಿದ 22 ಖಾತೆದಾರರನ್ನು ಕರೆಯಿಸಿ ವಿಚಾರಣೆ ನಡೆಸಲಾಗುವುದು. ಅವರು ನೀಡುವ ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಎಂ.ಡಿಗೆ ಕಮಿಷನ್ ರೂಪದಲ್ಲಿ ಹಣ:
‘ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಎಸ್. ಶಂಕರಪ್ಪ ಅವರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಲಾಗಿದೆ. ಶಂಕರಪ್ಪ ಅವರು ಅಕ್ರಮಕ್ಕೆ ಸಹಕಾರ ನೀಡಿರುವುದು ಗೊತ್ತಾಗಿದೆ. ಅವರು ತಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿಲ್ಲ. ಆದರೆ, ಪ್ರತಿ ಬಿಲ್‌ಗೆ ನಿಗದಿತ ಮೊತ್ತದ ಕಮಿಷನ್ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಎಲ್ಲ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದ ನಂತರ ಶಂಕರಪ್ಪ ಅವರು ಎಷ್ಟು ಹಣ ಪಡೆದಿದ್ದರು ಎಂಬುದು ಗೊತ್ತಾಗಲಿದೆ’ ಎಂದು ಮೂಲಗಳು ಹೇಳಿವೆ.
‘₹ 47.10 ಕೋಟಿ ಹಣ ವರ್ಗಾವಣೆ ಕಡತಗಳಿಗೆ ಶಂಕರಪ್ಪ ಅವರೇ ಸಹಿ ಮಾಡಿದ್ದಾರೆ. 600ಕ್ಕೂ ಅಧಿಕ ಕಾಮಗಾರಿಗಳು ನಡೆದಿಲ್ಲವಾದರೂ ಬಿಲ್ ಮಾಡಿ, ಹಣ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಅಕ್ರಮದಿಂದ ಬಂದ ಹಣವನ್ನು ಆರೋಪಿಗಳು ಮನೆ ನಿರ್ಮಾಣ ಹಾಗೂ ನಿವೇಶನ ಖರೀದಿಗೆ ಬಳಕೆ ಮಾಡಿರುವುದನ್ನೂ ಈಗಾಗಲೇ ಪತ್ತೆ ಮಾಡಲಾಗಿದೆ. ಎಲ್ಲೆಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂಬುದರ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ’ ಎಂದು ಅವರು ಹೇಳಿದರು.
ಡಿಡಿಯುಟಿಟಿಎಲ್‌ನಲ್ಲಿ 2021ರಿಂದ 2023ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಸಿ.ಎನ್. ಶಿವಪ್ರಕಾಶ್ ಅವರು ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. 2023ರ ಸೆಪ್ಟೆಂಬರ್ 23ರಂದು ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.
ಎಂ.ಡಿಗೆ ಕಮಿಷನ್ ರೂಪದಲ್ಲಿ ಹಣ
‘ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಎಸ್. ಶಂಕರಪ್ಪ ಅವರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಲಾಗಿದೆ. ಶಂಕರಪ್ಪ ಅವರು ಅಕ್ರಮಕ್ಕೆ ಸಹಕಾರ ನೀಡಿರುವುದು ಗೊತ್ತಾಗಿದೆ. ಅವರು ತಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿಲ್ಲ. ಆದರೆ, ಪ್ರತಿ ಬಿಲ್‌ಗೆ ನಿಗದಿತ ಮೊತ್ತದ ಕಮಿಷನ್ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಎಲ್ಲ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದ ನಂತರ ಶಂಕರಪ್ಪ ಅವರು ಎಷ್ಟು ಹಣ ಪಡೆದಿದ್ದರು ಎಂಬುದು ಗೊತ್ತಾಗಲಿದೆ’ ಎಂದು ಮೂಲಗಳು ಹೇಳಿವೆ.
‘₹ 47.10 ಕೋಟಿ ಹಣ ವರ್ಗಾವಣೆ ಕಡತಗಳಿಗೆ ಶಂಕರಪ್ಪ ಅವರೇ ಸಹಿ ಮಾಡಿದ್ದಾರೆ. 600ಕ್ಕೂ ಅಧಿಕ ಕಾಮಗಾರಿಗಳು ನಡೆದಿಲ್ಲವಾದರೂ ಬಿಲ್ ಮಾಡಿ, ಹಣ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.