ADVERTISEMENT

ದೇವರಾಜ ಅರಸು ಟ್ರಕ್ ಟರ್ಮಿನಲ್‌ | 668 ಖೊಟ್ಟಿ ಬಿಲ್: ₹39.42 ಕೋಟಿ ಅಕ್ರಮ?

* ಲೋಕಾಯುಕ್ತ ಪೊಲೀಸರು ಹಾಗೂ ಸಿಎಜಿ ವರದಿ ಪರಿಶೀಲಿಸುತ್ತಿರುವ ಸಿಐಡಿ * ಕಾಮಗಾರಿ ಸ್ಥಳ ತಪಾಸಣೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 23:03 IST
Last Updated 30 ಮೇ 2024, 23:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್‌ಗೆ (ಡಿಡಿಯುಟಿಟಿಎಲ್) ಸೇರಿದ್ದ ಸ್ಥಳಗಳಲ್ಲಿ ಯಾವುದೇ ಕೆಲಸ ಮಾಡದೇ 668 ಕಾಮಗಾರಿಗಳ ಹೆಸರಿನಲ್ಲಿ ಖೊಟ್ಟಿ ಬಿಲ್ ಸೃಷ್ಟಿಸಿ ₹ 39.42 ಕೋಟಿ ಮಂಜೂರು ಮಾಡಿದ್ದಕ್ಕೆ ದಾಖಲೆಗಳು ಲಭ್ಯವಾಗಿದ್ದು, ಈ ಬಗ್ಗೆ ಸಿಐಡಿ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಡಿಡಿಯುಟಿಟಿಎಲ್‌ನಲ್ಲಿ 2021ರಿಂದ 2023ರ ಅವಧಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಎಸ್‌. ಶಂಕರಪ್ಪ ಅವರನ್ನು ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ಅಕ್ರಮಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಪೊಲೀಸರು ಹಾಗೂ ಮಹಾ ಲೆಕ್ಕ ಪರಿಶೋಧಕರು (ಸಿಎಜಿ) ಪ್ರತ್ಯೇಕವಾಗಿ ಕಾಮಗಾರಿ ಸ್ಥಳಗಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದ್ದರು. ಪುರಾವೆಗಳ ಸಮೇತ ವರದಿಯ ಪ್ರತಿಗಳನ್ನು ಸಂಗ್ರಹಿಸಿರುವ ಸಿಐಡಿ ಅಧಿಕಾರಿಗಳು, ಮಾಹಿತಿ ಪರಿಶೀಲಿಸುತ್ತಿದ್ದಾರೆ.

‘ಡಿಡಿಯುಟಿಟಿಎಲ್‌ನಲ್ಲಿ ನಡೆದಿರುವ ಅಕ್ರಮ ಸಂಬಂಧ ಲೋಕಾಯುಕ್ತ ಪೊಲೀಸರು ಈ ಹಿಂದೆ ತನಿಖೆ ಮಾಡಿದ್ದರು. ಜೊತೆಗೆ, ಸಿಎಜಿಯವರು ಪುರಾವೆ ಸಮೇತ ವರದಿ ಸಿದ್ಧಪಡಿಸಿದ್ದರು. ಅಕ್ರಮದ ಬಗ್ಗೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ಕೈಗೊಂಡು, ಮಾಜಿ ಎಂ.ಡಿ. ಶಂಕರಪ್ಪ ಅವರನ್ನು ಬಂಧಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

821 ಕೆಲಸ ಮಂಜೂರು: ‘ಬೆಂಗಳೂರು ಶಾಂತಿನಗರದಲ್ಲಿರುವ ಡಿಡಿಯುಟಿಟಿಎಲ್‌ ಮುಖ್ಯಕಚೇರಿ, ಯಶವಂತಪುರ, ದಾಸನಪುರ, ಹೊಸಪೇಟೆಯ ಅಮರಾವತಿ, ದಾಂಡೇಲಿ, ಹುಬ್ಬಳ್ಳಿಯ ಅಂಚಟಗೇರಿ, ಧಾರವಾಡ ಹಾಗೂ ಮೈಸೂರು ಟ್ರಕ್‌ ಟರ್ಮಿನಲ್‌ನಲ್ಲಿ 821 ಕೆಲಸಗಳನ್ನು ಕೈಗೊಳ್ಳಲು ಮಂಜೂರಾತಿ ನೀಡಲಾಗಿತ್ತು’ ಎಂಬ ಮಾಹಿತಿ ಸಿಎಜಿ ವರದಿಯಲ್ಲಿದೆ.

‘821 ಕೆಲಸಗಳು ಪೂರ್ಣಗೊಂಡಿರುವುದಾಗಿ ಹೇಳಿ ₹ 48.60 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅಕ್ರಮದ ಬಗ್ಗೆ ದೂರುಗಳು ಕೇಳಿಬರುತ್ತಿದ್ದಂತೆ 2024ರ ಫೆಬ್ರುವರಿಯಲ್ಲಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಾಗಿದೆ. 821 ಕೆಲಸಗಳ ಪೈಕಿ 153 ಕೆಲಸಗಳು ಮಾತ್ರ ಆಗಿದೆ. ಉಳಿದಂತೆ, 668 ಸ್ಥಳಗಳಲ್ಲಿ ಯಾವುದೇ ಕೆಲಸ ನಡೆದಿಲ್ಲದಿರುವುದು ಗೊತ್ತಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ಶೌಚಾಲಯ ಕಟ್ಟಡದ ನವೀಕರಣ, ವಿದ್ಯುತ್ ಸರಬರಾಜು ವ್ಯವಸ್ಥೆ ದುರಸ್ತಿ, ಒಳಚರಂಡಿ ಪೈಪ್ ಅಳವಡಿಕೆ, ಕಾಲುವೆಗಳ ನಿರ್ಮಾಣ ಹಾಗೂ ಸ್ವಚ್ಛತೆ ಸೇರಿದಂತೆ ಹಲವು ಬಗೆಯ ಕೆಲಸಗಳನ್ನು ತುಂಡು ಗುತ್ತಿಗೆ ನೀಡಲಾಗಿತ್ತು’ ಎಂಬ ಮಾಹಿತಿಯೂ ವರದಿಯಲ್ಲಿದೆ.

ಸ್ಥಳ ಪರಿಶೀಲನೆ:

‘ಲೋಕಾಯುಕ್ತ ಪೊಲೀಸರು ಹಾಗೂ ಸಿಎಜಿ ವರದಿಯಲ್ಲಿ ಕಾಮಗಾರಿ ಸ್ಥಳಗಳನ್ನು ಉಲ್ಲೇಖಿಸಲಾಗಿದೆ. ಅಧಿಕಾರಿಗಳ ತಂಡ ಪುನಃ ಸ್ಥಳಗಳಿಗೆ ಭೇಟಿ ಮಾಡಿ ಫೋಟೊ ಹಾಗೂ ವಿಡಿಯೊ ಸಮೇತ ಮಾಹಿತಿ ದಾಖಲಿಸಿಕೊಳ್ಳಲಿದೆ. ಇದು ತನಿಖೆಗೆ ಸಹಕಾರಿಯಾಗಲಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಅಮಾನತು ಮಾಡಲು ಹಿಂದೇಟು’

‘ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಎಸ್‌. ಶಂಕರಪ್ಪ ಅವರು ಸಿಐಡಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ. ಅವರನ್ನು ಸೇವೆಯಿಂದ ಅಮಾನತು ಮಾಡಿ’ ಎಂದು ಇಲಾಖೆಯ ಕಾರ್ಯದರ್ಶಿಗೆ ಆಯುಕ್ತರು ಶಿಫಾರಸು ಮಾಡಿದ್ದಾರೆ.

ಆದರೆ, ಶಂಕರಪ್ಪ ಅವರನ್ನು ಅಮಾನತು ಮಾಡಲು ಕಾರ್ಯದರ್ಶಿಯವರು ಹಿಂದೇಟು ಹಾಕುತ್ತಿರುವ ಆರೋಪ ವ್ಯಕ್ತವಾಗಿದೆ.

ಸಿಐಡಿ ಅಧಿಕಾರಿಗಳನ್ನು ಬುಧವಾರ ಭೇಟಿ ಮಾಡಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು, ಶಂಕರಪ್ಪ ಬಂಧನಕ್ಕೆ ಸಂಬಂಧಿಸಿದ ಮಾಹಿತಿ ಪಡೆದಿದ್ದರು. ತನಿಖಾ ತಂಡ ನೀಡಿದ ವರದಿ ಆಧರಿಸಿ, ಶಂಕರಪ್ಪ ಅಮಾನತಿಗೆ ಇಲಾಖೆಯ ಆಯುಕ್ತ ವಿಕಾಸ್‌ ಕಿಶೋರ್‌ ಸುರಳ್ಕರ್‌ ಬುಧವಾರವೇ ಶಿಫಾರಸು ಮಾಡಿದ್ದರು.

ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ, ಯಾವುದೇ ಸರ್ಕಾರಿ ಅಧಿಕಾರಿ ಅಥವಾ ನೌಕರ 48 ಗಂಟೆಗಳ ಬಂಧನದಲ್ಲಿದ್ದರೆ ಆತನನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.