ADVERTISEMENT

ಡಿಕೆಶಿ ತಂದೆಯ ಕೃಷಿ ಆದಾಯ ವಾರ್ಷಿಕ ₹ 25 ಲಕ್ಷ: ತಹಶೀಲ್ದಾರ್‌ ಪ್ರಮಾಣಪತ್ರ

ಸಿದ್ದಯ್ಯ ಹಿರೇಮಠ
Published 20 ಅಕ್ಟೋಬರ್ 2019, 3:22 IST
Last Updated 20 ಅಕ್ಟೋಬರ್ 2019, 3:22 IST
   

ನವದೆಹಲಿ: ಕೃಷಿಯಿಂದ ತಮ್ಮ ತಂದೆಗೆ ದೊರೆತಿರುವ ಆದಾಯವನ್ನು ದೃಢೀಕರಿಸಲು ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ತಹಶೀಲ್ದಾರರ ಪ್ರಮಾಣಪತ್ರದ ಕುರಿತು ತನಿಖೆ ನಡೆಯುತ್ತಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ತಂದೆ ಕೆಂಪೇಗೌಡ ಅವರಿಗೆ ಕೃಷಿಯಿಂದಲೇ ವಾರ್ಷಿಕ ₹ 25 ಲಕ್ಷ ಆದಾಯ ಇತ್ತು ಎಂದು ಆರೋಪಿ ತಿಳಿಸಿದ್ದು, ಅದನ್ನು ದೃಢಪಡಿಸಲು ತಹಶೀಲ್ದಾರರಿಂದ ಪಡೆದ ಪ್ರಮಾಣಪತ್ರ ಸಲ್ಲಿಸಲಾಗಿದೆ. ಆದರೆ, ಯಾವುದೇ ದಿನಾಂಕ ನಮೂದಿಸದ ಆ ಪ್ರಮಾಣ ಪತ್ರದ ನೈಜತೆ ಕುರಿತು ತನಿಖೆ ಜಾರಿಯಲ್ಲಿದೆ ಎಂದು ಶಿವಕುಮಾರ್‌ ಅವರ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಿರುವ ಹೇಳಿಕೆಯಲ್ಲಿ ಇ.ಡಿ. ವಿವರಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಕಳೆದ ಸೆಪ್ಟೆಂಬರ್‌ 3ರಂದು ಬಂಧನಕ್ಕೆ ಒಳಗಾಗಿರುವ ಶಿವಕುಮಾರ್‌ ತಿಹಾರ್‌ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಅವರನ್ನು ಆಗಸ್ಟ್‌ 30ರಿಂದ ಸೆ.12ರವರೆಗೆ ಒಟ್ಟು 12 ದಿನಗಳ ಕಾಲ ಅಕ್ರಮದ ಕುರಿತು, ಆಸ್ತಿ– ಪಾಸ್ತಿ ಕುರಿತು ಪ್ರಶ್ನಿಸಲಾಗಿದೆ. ಆದರೆ, ಆದಾಯದ ಮೂಲ ಯಾವುದು ಎಂಬುದನ್ನೂ, ಕೃಷಿಯಿಂದ ಬಂದ ಆದಾಯದ ದಾಖಲೆಗಳನ್ನೂ ಅವರು ಪ್ರಸ್ತುತಪಡಿಸಿಲ್ಲ. ಸಮರ್ಪಕ ಉತ್ತರವನ್ನೂ ನೀಡಿಲ್ಲ ಎಂದು ಹೇಳಿಕೆಯಲ್ಲಿ ದೂರಲಾಗಿದೆ.

ADVERTISEMENT

ಕೃಷಿಯಿಂದಲೇ ₹ 25 ಲಕ್ಷ ಆದಾಯ ಇತ್ತು ಎಂಬುದನ್ನು ಪ್ರಮಾಣೀ ಕರಿಸಲು ಜಮೀನಿನ ವಿವರ, ಅಲ್ಲಿ ಯಾವ ಬೆಳೆ ಬೆಳೆದಿದ್ದರು ಎಂಬ ವಿವರಗಳು ತಹಶೀಲ್ದಾರ್ ನೀಡಿರುವ ಪ್ರಮಾಣಪತ್ರದಲ್ಲಿ ಇಲ್ಲ. ಅಲ್ಲದೆ, ಯಾವ ದಾಖಲೆಗಳನ್ನು ಆಧರಿಸಿ ಈ ಪ್ರಮಾಣಪತ್ರ ನೀಡಲಾಗಿದೆ ಎಂಬ ಅಂಶವೂ ಇಲ್ಲ. ಹಾಗಾಗಿ ಅಗತ್ಯ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ. ಅಭಿಪ್ರಾಯಪಟ್ಟಿದೆ.

ಆರೋಪಿಯ ದೆಹಲಿ ನಿವಾಸದಲ್ಲಿ ₹ 8.59 ಕೋಟಿ ಪತ್ತೆ ಆಗಿರುವ ಪ್ರಕರಣದಲ್ಲಿ ಕರ್ನಾಟಕ ಭವನದ ನೌಕರ ಆಂಜನೇಯ ಹನುಮಂತ ಅವರ ಪಾತ್ರವೂ ಪ್ರಮುಖವಾಗಿದೆ. ಸೆಪ್ಟೆಂಬರ್‌ 4ರಂದು ಅವರ ಮನೆಯ ಮೇಲೆ ತಪಾಸಣೆ ನಡೆಸಿ, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿತ್ತು. ಹಣಕಾಸಿನ ಯಾವುದೇ ಮಾಹಿತಿ ಬಹಿರಂಗ ಆಗಕೂಡದು ಎಂಬ ದುರುದ್ದೇಶದಿಂದಲೇ ಅದರ ಹಿಂದಿನ ದಿನವಷ್ಟೇ ಆಂಜನೇಯ ಮೊಬೈಲ್‌ ಅನ್ನು ಫಾರ್ಮಾಟ್‌ ಮಾಡಿದ್ದರು ಎಂದೂ ಇ.ಡಿ. ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಹಣಕಾಸಿನ ವ್ಯವಹಾರದ ಮಾಹಿತಿ ಇರಬಹುದಾದ ಆರೋಪಿಯ ವೈಯಕ್ತಿಕ ಲ್ಯಾಪ್‌ಟಾಪ್‌ ಅನ್ನು ಆಂಜನೇಯ ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಅಕ್ರಮದ ವಿವರ ತನಿಖಾಧಿಕಾರಿಗಳಿಗೆ ಸಿಗಬಾರದು ಎಂದೇ ಲ್ಯಾಪ್‌ಟಾಪ್‌ ಮರೆಮಾಚಲು ಯತ್ನಿಸಲಾಗಿತ್ತು. ತನಿಖೆಯ ಭಾಗವಾಗಿ ಅದನ್ನು ವಿಧಿ ವಿಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಇ.ಡಿ. ವಿವರ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.