ADVERTISEMENT

ದಲಿತರು ಏಕೆ ಸಿ.ಎಂ ಆಗಬಾರದು: ಡಿ.ಕೆ. ಶಿವಕುಮಾರ್‌

ಕಾಂಗ್ರೆಸ್ ಸೇರ್ಪಡೆಗೆ ಜೆಡಿಎಸ್‌ನ 15 ಮಾಜಿ ಶಾಸಕರ ಅರ್ಜಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 14:30 IST
Last Updated 9 ಡಿಸೆಂಬರ್ 2022, 14:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಬೇರೆಯವರಂತೆ ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುತ್ತೇನೆ, ದಲಿತರನ್ನು ಮಾಡುತ್ತೇನೆ ಎಂದು ನಾನು ಹೇಳುವುದಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ದಲಿತರಿಗೂ ಮುಖ್ಯಮಂತ್ರಿ ಆಗುವ ಅವಕಾಶವಿದೆ. ದಲಿತರು ಏಕೆ ಮುಖ್ಯಮಂತ್ರಿ ಆಗಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿ ಅನೇಕ ಸಮರ್ಥ ನಾಯಕರಿದ್ದಾರೆ. ಕೆ.ಎಚ್‌. ರಂಗನಾಥ್‌ ಅವರಿಂದ ಆರಂಭವಾಗಿ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್‌ ಸೇರಿದಂತೆ ಹಲವು ಕಷ್ಟದ ಸಮಯದಲ್ಲಿ ಪಕ್ಷವನ್ನು ಮುನ್ನಡೆಸಿದ್ದಾರೆ. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದೇವೆ. ಅವರು ದಲಿತರು ಎನ್ನುವುದಕ್ಕಿಂತ ಅತ್ಯಂತ ಹಿರಿಯ ಹಾಗೂ ಅನುಭವಿ ರಾಜಕಾರಣಿ ಎಂಬುದನ್ನು ಪರಿಗಣಿಸಿ ಪಕ್ಷವು ಈ ಸ್ಥಾನ ನೀಡಿದೆ’ ಎಂದರು.

ಕಾಂಗ್ರೆಸ್‌ ಪಕ್ಷ ತಮ್ಮ ಮನೆಯ ಆಸ್ತಿಯಲ್ಲ. ಇದು ಎಲ್ಲರಿಗೂ ಸೇರಿರುವ ಪಕ್ಷ. ವೀರಪ್ಪ ಮೊಯಿಲಿ, ಧರ್ಮ ಸಿಂಗ್‌, ಎಸ್‌. ಬಂಗಾರಪ್ಪ ಅವರ ಸಮಾಜದ ಜನಸಂಖ್ಯೆ ಎಷ್ಟಿತ್ತು? ಹಿಂದುಳಿದ ವರ್ಗದವರು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿಲ್ಲವೆ? ಗುಂಡೂರಾವ್‌ ಅವರೂ ಮುಖ್ಯಮಂತ್ರಿ ಆಗಿರಲಿಲ್ಲವೆ? ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಅವಕಾಶಗಳಿವೆ ಎಂದು ಹೇಳಿದರು.

ADVERTISEMENT

ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ: ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್‌ ಕಾಂಗ್ರೆಸ್‌ಗೆ ಮರಳುತ್ತಾರಾ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್‌ ಪಕ್ಷದಿಂದ ಒಬ್ಬರು ಖಾಲಿಯಾದರೆ ಮತ್ತೊಬ್ಬರು ಆ ಸ್ಥಾನಕ್ಕೆ ಬರುತ್ತಾರೆ. ನಾನು ಈ ಸ್ಥಾನ ಬಿಟ್ಟರೆ ಇನ್ನೊಬ್ಬರು ಬರುತ್ತಾರೆ. ಶಿವರಾಂ ಹೆಬ್ಬಾರ್‌ ಕ್ಷೇತ್ರದಲ್ಲಿ ವಿ.ಎಸ್‌. ಪಾಟೀಲ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಿರೇಕೆರೂರಿನಲ್ಲಿ ಯು.ಬಿ. ಬಣಕಾರ್‌ ಪಕ್ಷಕ್ಕೆ ಬಂದಿದ್ದಾರೆ’ ಎಂದು ಉತ್ತರಿಸಿದರು.

ಚುನಾವಣೆಯಲ್ಲಿ ಸಾಕಷ್ಟು ಅಚ್ಚರಿಗಳಿರುತ್ತವೆ. ವಲಸಿಗರು ಎಂದೆಲ್ಲ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಬಣಕಾರ್‌, ವಿ.ಎಸ್‌. ಪಾಟೀಲ್‌, ಮಧು ಬಂಗಾರಪ್ಪ, ಶರತ್‌ ಬಚ್ಚೇಗೌಡ ವಲಸಿಗರೆ? ಜೆಡಿಎಸ್‌ನ 15 ಮಾಜಿ ಶಾಸಕರು ಕಾಂಗ್ರೆಸ್‌ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದಾರೆ. ರಾಜಕೀಯ ನಿಂತ ನೀರಲ್ಲ. ಏನು ಬೇಕಾದರೂ ಆಗಬಹುದು ಎಂದು ಶಿವಕುಮಾರ್‌ ಹೇಳಿದರು.

ಗುಬ್ಬಿಯಲ್ಲಿ ಜೆಡಿಎಸ್‌ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ಬಂಡಾಯ ಏಳುವುದಾಗಿ ಪಕ್ಷದ ಮುಖಂಡರು ಎಚ್ಚರಿಕೆ ನೀಡಿರುವ ಕುರಿತು ಕೇಳಿದಾಗ, ‘ಯಾರು ಯಾವ ರೀತಿಯ ಬಂಡಾಯ ಬೇಕಾದರೂ ಏಳಲಿ. ಪಕ್ಷಕ್ಕೆ ಅನುಕೂಲವಾಗುವ ರೀತಿ ಟಿಕೆಟ್‌ ಹಂಚಿಕೆ ನಡೆಯುತ್ತದೆ. ವ್ಯಕ್ತಿಯ ಅರ್ಹತೆ ಪರಿಗಣಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು’ ಎಂದರು.

ಉದಯಪುರ ಘೋಷಣೆಯಂತೆ ಹೊಸಬರಿಗೆ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಖರ್ಗೆ ಒಲವು ಹೊಂದಿದ್ದಾರೆ. ಚುನಾವಣಾ ತಂತ್ರಗಾರಿಕೆಯ ಎಲ್ಲ ವಿವರಗಳನ್ನು ಈಗಲೇ ಬಹಿರಂಗಪಡಿಸಲು ಆಗುವುದಿಲ್ಲ ಎಂದು ಹೇಳಿದರು.

‘ಕಾಳಜಿಯಿಂದ ಹೇಳಿದ ಮಾತು’‌

‘ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿ.ಕೆ. ಶಿವಕುಮಾರ್‌ ಹೆಣಗಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕ ಜಿ. ಪರಮೇಶ್ವರ್‌ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಅವರು ನನ್ನ ಮೇಲಿನ ಕಾಳಜಿಯಿಂದ ಹಾಗೆ ಹೇಳಿದ್ದಾರೆ. ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಯಾವಾಗಲೂ ಹೇಳುತ್ತಿರುತ್ತಾರೆ’ ಎಂದರು.

‘ದಿನಕ್ಕೆ ಇರುವುದೇ 24 ಗಂಟೆ. ಅದಕ್ಕಿಂತ ಹೆಚ್ಚು ಸಮಯವಿದ್ದರೆ ಇನ್ನಷ್ಟು ಕೆಲಸ ಮಾಡಬಹುದಿತ್ತು. ನಿತ್ಯವೂ ನಾನು ರಾತ್ರಿ ಮಲಗುವಾಗ 2ರಿಂದ 3 ಗಂಟೆ ಆಗಿರುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.