ಬೆಂಗಳೂರು: ಡಿ.ಫಾರ್ಮಾ (ಫಾರ್ಮಸಿ ಡಿಪ್ಲೊಮಾ) ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಮೌಲ್ಯಮಾಪನ ಸಮಯದಲ್ಲಿ ಪತ್ತೆಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ 104 ವಿದ್ಯಾರ್ಥಿಗಳಿಗೆ ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿ ನೋಟಿಸ್ ನೀಡಿದೆ.
ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳ 397 ಉತ್ತರ ಪತ್ರಿಕೆಗಳು ದೊರೆತಿದ್ದವು. ಹಗರಣದಲ್ಲಿ ಹೊರಗಿನ ರಾಜ್ಯಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಂಡಳಿ ಈಗಾಗಲೇ ಪ್ರಾಥಮಿಕ ವಿಚಾರಣೆ ಆರಂಭಿಸಿದ್ದು, ಉನ್ನತಮಟ್ಟದ ತನಿಖೆ ನಡೆಸಲು ಕೋರಿ ನಿರ್ಣಯ ಕೈಗೊಂಡಿದೆ.
ಗೈರಾಗಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪ್ರವೇಶ ಪತ್ರಗಳನ್ನೂ ನೀಡಿಲ್ಲ. ಖಾಸಗಿ ಫಾರ್ಮಸಿ ಕಾಲೇಜುಗಳಿಗೆ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರುವ ಮಧ್ಯವರ್ತಿಗಳ ಕೈವಾಡ ಇರಬಹುದು. ಹೊರಗಿನಿಂದ ಉತ್ತರ ಬರೆಸಿ, ನಂತರ ಸೇರ್ಪಡೆ ಮಾಡಲಾಗಿದೆ ಎಂಬ ಶಂಕೆಯನ್ನು ಮಂಡಳಿ ವ್ಯಕ್ತಪಡಿಸಿದೆ.
‘ಪ್ರಕರಣದ ಆಂತರಿಕ ವಿಚಾರಣೆ ನಡೆದಿದೆ. ವಿಚಾರಣೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ಪ್ರಾಥಮಿಕ ವರದಿ ಸಿದ್ಧಪಡಿಸಿದ ನಂತರ ಮುಂದಿನ ನಡೆ ನಿರ್ಧರಿಸಲಾಗುತ್ತದೆ. ಈ ಕುರಿತು ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಔಷಧ ನಿಯಂತ್ರಕರಿಗೂ ಪತ್ರ ಬರೆಯಲಾಗಿದೆ’ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ದ್ವಿತೀಯ ಪಿಯು ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಎರಡು ವರ್ಷಗಳ ಡಿ.ಫಾರ್ಮಾಕ್ಕೆ ಪ್ರವೇಶ ಪಡೆಯುತ್ತಾರೆ. ಕೋರ್ಸ್ ಮುಗಿದ ನಂತರ ಆಸ್ಪತ್ರೆಗಳು, ಔಷಧಾಲಯಗಳಲ್ಲಿ ಔಷಧ ಮೇಲ್ವಿಚಾರಕರಾಗಿ (ಫಾರ್ಮಸಿಸ್ಟ್) ಕಾರ್ಯನಿರ್ವಹಿಸುತ್ತಾರೆ.
ಇದೇ ವರ್ಷದ ಜನವರಿಯಲ್ಲಿ ಡಿ.ಫಾರ್ಮಾದ ಮೊದಲ ವರ್ಷದ ಪರೀಕ್ಷೆಗಳು ನಡೆದಿದ್ದವು. ರಾಜ್ಯದ 350 ಫಾರ್ಮಸಿ ಕಾಲೇಜುಗಳ ಸುಮಾರು 20 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಔಷಧ ನಿಯಂತ್ರಣ ಇಲಾಖೆಯ ಅಧೀನದಲ್ಲಿರುವ ಪರೀಕ್ಷಾ ಪ್ರಾಧಿಕಾರ ಮಂಡಳಿಯು ಡಿ. ಫಾರ್ಮಾ ಕಾಲೇಜುಗಳ ಮಾನ್ಯತೆ, ಪ್ರವೇಶ ಪ್ರಕ್ರಿಯೆ, ಪರೀಕ್ಷೆಯ ಮೇಲುಸ್ತುವಾರಿ ನಡೆಸುತ್ತದೆ.
ಪರೀಕ್ಷಾ ವಿಭಾಗವನ್ನು ಮಂಡಳಿ ಸಂಪೂರ್ಣ ಡಿಜಿಟಲೀಕರಣಗೊಳಿಸಿದೆ. ಪರೀಕ್ಷೆಗಳು ಆರಂಭವಾದ ಒಂದು ಗಂಟೆ ಒಳಗೆ ಗೈರಾದವರ ವಿವರಗಳನ್ನು ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸಿ.ಸಿ. ಟಿ.ವಿ ಕ್ಯಾಮೆರಾ ಇರುವುದರಿಂದ ಪರೀಕ್ಷಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ನಿಖರವಾಗಿ ಸಿಗುತ್ತದೆ. ಅಷ್ಟೇ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನಂತರ ಮಾರ್ಪಾಡು ಮಾಡಲು ಅವಕಾಶ ಇರುವುದಿಲ್ಲ. ಹಾಗಾಗಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉತ್ತರ ಪತ್ರಿಕೆಗಳು ಹೊಂದಾಣಿಕೆಯಾಗಬೇಕು. ಮೌಲ್ಯಮಾಪನದ ಸಮಯದಲ್ಲಿ ಹೆಚ್ಚುವರಿ ಉತ್ತರ ಪತ್ರಿಕೆಗಳು ಲಭ್ಯವಾದ ಕಾರಣ ಹಗರಣ ಪತ್ತೆಯಾಗಿದೆ ಎಂದು ಮಂಡಳಿಯ ಮೂಲಗಳು ವಿವರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.