ADVERTISEMENT

ನಿಂಬಾಳ್ಕರ್‌ ರಕ್ಷಣೆಗೆ ನಿಂತಿರುವ ಆರೋಪ: ರಜನೀಶ್‌ ಗೋಯಲ್‌ ವಿರುದ್ಧ ರೂಪಾ ದೂರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 19:30 IST
Last Updated 30 ಡಿಸೆಂಬರ್ 2020, 19:30 IST
ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್
ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್   
""

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಠೇವಣಿದಾರರಿಗೆ ವಂಚಿಸಿದ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರಿಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೃಹ ಇಲಾಖೆಯ ಕಾರ್ಯದರ್ಶಿ ಡಿ. ರೂಪಾ ಅವರು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರಿಗೆ ಮಂಗಳವಾರ ಎರಡು ಪುಟಗಳ ಪತ್ರ ಬರೆದಿರುವ ಐಪಿಎಸ್‌ ಅಧಿಕಾರಿ ರೂಪಾ, ‘ಆರೋಪಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡುವುದು ಮತ್ತು ಶಿಸ್ತುಕ್ರಮ ಜರುಗಿಸುವ ವಿಷಯದಲ್ಲಿ ರಜನೀಶ್‌ ಗೋಯಲ್‌ ಅವರು ಆರೋಪಿತ ಅಧಿಕಾರಿ ನಿಂಬಾಳ್ಕರ್‌ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದು ದೂರಿದ್ದಾರೆ.

ನಿಂಬಾಳ್ಕರ್‌ ಸೇರಿದಂತೆ ಐಎಂಎ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸಿಬಿಐ ಅಧಿಕಾರಿಗಳು 2019ರ ಡಿಸೆಂಬರ್‌ನಲ್ಲಿ ಪತ್ರ ಬರೆದಿದ್ದರು. ಆದರೆ, 2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಅನುಮತಿ ನೀಡಲಾಗಿದೆ. ಆರೋಪಿತರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆಯೂ ಸಿಬಿಐ ಶಿಫಾರಸು ಮಾಡಿತ್ತು. ಕೆಳಹಂತದ ಅಧಿಕಾರಿಗಳ ಅಮಾನತ್ತಿಗೆ ಕ್ರಮ ಜರುಗಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹೇಮಂತ್‌ ನಿಂಬಾಳ್ಕರ್‌ ಅಮಾನತಿಗೆ ಈವರೆಗೂ ಪ್ರಸ್ತಾವವನ್ನೇ ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.

ADVERTISEMENT

‘ನಿರ್ಭಯಾ ನಿಧಿ ಅನುದಾನದಲ್ಲಿ ‘ಸುರಕ್ಷ ನಗರ’ ಯೋಜನೆಯ ಟೆಂಡರ್‌ಗೆ ಸಂಬಂಧಿಸಿದಂತೆ ಹೇಮಂತ್‌ ನಿಂಬಾಳ್ಕರ್‌ ಸುಳ್ಳು ಆರೋಪ ಹೊರಿಸಿ ಬರೆದ ಪತ್ರದ ಆಧಾರದಲ್ಲಿ ರಜನೀಶ್‌ ಗೋಯಲ್‌ ಅವರು ತ್ವರಿತವಾಗಿ ತನಿಖೆಗೆ ಆದೇಶಿಸಿದ್ದಾರೆ. ಆದರೆ, ನಿಂಬಾಳ್ಕರ್‌ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸಿಬಿಐ ಸಲ್ಲಿಸಿದ್ದ ಪ್ರಸ್ತಾವದ ಆಧಾರದಲ್ಲಿ ಕ್ರಮ ಜರುಗಿಸಲು ವಿಫಲರಾಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಐಎಂಎ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ಕಡತ ಗೃಹ ಇಲಾಖೆ ಕಾರ್ಯದರ್ಶಿಯಾಗಿರುವ ನನ್ನ ಅಧಿಕಾರ ವ್ಯಾಪ್ತಿಯಲ್ಲಿದೆ. ಈ ಕಾರಣಕ್ಕಾಗಿಯೇ ಪತ್ರ ಬರೆದಿದ್ದೇನೆ’ ಎಂದು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ರೂಪಾ ಉಲ್ಲೇಖಿಸಿದ್ದಾರೆ.

ರಜನೀಶ್ ಗೋಯಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.