ADVERTISEMENT

ದಲಿತ ಸಿಎಂ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು: ಕೆ.ಎಚ್.ಮುನಿಯಪ್ಪ

‘ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಇಳಿಯುವ ಸಂದರ್ಭ ಬಂದರೆ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ’

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 13:24 IST
Last Updated 10 ಅಕ್ಟೋಬರ್ 2024, 13:24 IST
   

ಕೋಲಾರ: ‘ದಲಿತ ಮುಖ್ಯಮಂತ್ರಿ ಮಾಡುವ ವಿಚಾರವನ್ನು ಹೈಕಮಾಂಡ್‍ ವಿವೇಚನೆಗೆ ಬಿಡೋಣ. ನಾನು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಎಲ್ಲಾ ಶಾಸಕರು, ಸಚಿವರು ಒಗ್ಗಟ್ಟಾಗಿ ನಿಂತು ಅವರ ಕೈ ಬಲಪಡಿಸುವೆವು. ಜೊತೆಗೆ ಬಿಜೆಪಿಯ ಹುನ್ನಾರಗಳಿಗೆ ಪಾಠ ಹೇಳುವ ಶಕ್ತಿಯನ್ನೂ ನೀಡುತ್ತೇವೆ’ ಎಂದರು.

‘ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತಹ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಎಂದಿಗೂ ಬರುವುದಿಲ್ಲ. ಒಂದು ವೇಳೆ ಬಂದರೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಹೇಳಿದರು.

ADVERTISEMENT

‘ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಿಂದಲೂ ದಲಿತ ಮುಖ್ಯಮಂತ್ರಿ ಕೂಗು ಕೇಳಿ ಬರುತ್ತಲೇ ಇದೆ. ಈವರೆಗೆ ಮಾಡಿಲ್ಲ. ಆದರೆ, ಈ ಬಗ್ಗೆ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಸೂಚಿಸಿದೆ. ಹೀಗಾಗಿ, ನಾನೂ ಮಾತನಾಡುವುದಿಲ್ಲ’ ಎಂದರು.

ಸಚಿವರಾದ ಸತೀಶ ಜಾರಕಿಹೊಳಿ, ಜಿ.ಪರಮೇಶ್ವರ, ಡಾ.ಎಚ್‌.ಸಿ.ಮಹದೇವಪ್ಪ ಗೋಪ್ಯ ಸಭೆ ನಡೆಸಿರುವುದರ ಬಗ್ಗೆ ಪ್ರತಿಕ್ರಿಯಿಸಿ, ಖರ್ಗೆ ಬಳಿಕ ಇರುವ ಹಿರಿಯರು ಯಾರು ಎಂದು ಪ್ರಶ್ನಿಸಿದರು.

‘ಚಿತ್ರದುರ್ಗದಲ್ಲಿ ನಡೆದಿದ್ದ ಐಕ್ಯತಾ ಸಮಾವೇಶದಿಂದಲೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಸಂಪೂರ್ಣವಾಗಿ ನಮ್ಮೊಂದಿಗೆ ಇದ್ದಾರೆ. ಹೀಗಾಗಿಯೇ, ನಮಗೆ 136 ಸ್ಥಾನಗಳು ಬಂದಿದ್ದು, ಸರ್ಕಾರ ರಚಿಸಿದ್ದೇವೆ’ ಎಂದು ಹೇಳಿದರು.

‘ಜಾತಿ ಗಣತಿ ವಿಚಾರವು ಸಂಪುಟದಲ್ಲಿ ಚರ್ಚೆಯಾಗಬೇಕಿದ್ದು, ಗಣತಿಯಿಂದಾಗಿ ಯಾವ ಸಮುದಾಯಕ್ಕೂ ಅನ್ಯಾಯವಾಗಲು ಅವಕಾಶವಿರುವುದಿಲ್ಲ. ಹಿಂದುಳಿದ ವರ್ಗದಲ್ಲಿ ನೂರಾರು ಉಪಜಾತಿಗಳಿವೆ. ಅವರಿಗೆಲ್ಲ ನ್ಯಾಯ ಸಿಗಲು ಅಂಕಿಅಂಶಗಳು ಇರಬೇಕು. ಸದ್ಯ ಅಲ್ಲಿಯೂ ಕೆಲವೇ ಕೆಲವರು ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಎಲ್ಲರಿಗೂ ಸಿಗುತ್ತಿಲ್ಲ. ಹೀಗಾಗಿ, ಜಾತಿ ಗಣತಿ ಆರೋಗ್ಯಕರವಾಗಿರುತ್ತದೆಯೇ ಹೊರತು ಯಾರಿಗೂ ತೊಂದರೆಯಾಗುವುದಿಲ್ಲ. ಈ ಬಗ್ಗೆ ಸಂಶಯ ಬೇಡ. ಚರ್ಚೆಯಾದ ಬಳಿಕ ಏನಾದರೂ ಲೋಪದೋಷಗಳಿದ್ದರೆ ಸರಿಪಡಿಸಿಯೇ ಜಾರಿ ಮಾಡಲಾಗುವುದು’ ಎಂದರು.

‘ಈ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರ ನೀಡಲು ನಾನು ಈಗ ತಯಾರಿಲ್ಲ. ಕಾರಣ ಸಚಿವ ಸಂಪುಟದಲ್ಲಿ ಚರ್ಚೆಯಾಗಿ, ಅದರ ಸಾಧಕ ಬಾಧಕ ತಿಳಿದುಕೊಳ್ಳಬೇಕಿದೆ. ಆ ಬಳಿಕ ಮಾತನಾಡುವೆ’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.