ADVERTISEMENT

ಹಿಂಬಡ್ತಿ ಆದೇಶ ಬೇಗ ವಾಪಸ್ಸು ಪಡೆಯಿರಿ: ದಲಿತ ಸಂಘಟನೆಗಳ ಒಕ್ಕೂಟದ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 10:23 IST
Last Updated 25 ಫೆಬ್ರುವರಿ 2019, 10:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕರ್ನಾಟಕ(ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ಜೇಷ್ಠತೆ ವಿಸ್ತರಿಸುವ ಕಾಯ್ದೆ–2017 ಅನ್ನು ಅನುಷ್ಠಾನಗೊಳಿಸಿ, ಹಿಂಬಡ್ತಿ ಆದೇಶಗಳನ್ನು ವಾಪಸ್ಸು ಪಡೆಯಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ’ ಎಂದು ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

‘ಜನವರಿ 30ರಂದು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎಲ್ಲ ಹಿಂಬಡ್ತಿಗಳನ್ನು ರದ್ದುಪಡಿಸಿ, ಜೇಷ್ಠತಾ ಪಟ್ಟಿಗಳನ್ನು ಪ್ರಕಟಿಸಿಲ್ಲ. ಬದಲಿಗೆ ಕಾಯ್ದೆಗೆ ಸಂಬಂಧವಿಲ್ಲದ 1996ರ ಬ್ಯಾಕ್‌ಲಾಗ್‌ ಹುದ್ದೆಗಳನ್ನು ತುಂಬುವ ಆದೇಶಗಳನ್ನು ಹೊರಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಅನ್ಯಾಯವಾಗುವ ರೀತಿಯಲ್ಲಿ ಜೇಷ್ಠತೆಯನ್ನು ಪರಿಷ್ಕರಿಸಿದ ನಂತರ, ಹಿಂಬಡ್ತಿಗಳನ್ನು ವಾಪಸ್ಸು ಪಡೆಯಲು ವಿಳಂಬ ಮಾಡಲಾಗುತ್ತಿದೆ. ಅಹಿಂಸಾ ನೌಕರರ ಪರವಾಗಿ ಕರಡು ಆದೇಶಗಳನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ಒಕ್ಕೂಟದಲ್ಲಿನ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ದೂರಿದರು.

ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಮಾವಳ್ಳಿ ಶಂಕರ್‌, ‘ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿದ್ಧಪಡಿಸಿರುವ ಕರಡು ಆದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರಿಗೆ ನೀಡಿರುವ 3,799 ಬಡ್ತಿಗಳ ಹುದ್ದೆಗಳನ್ನು ಸೂಪರ್‌ ನ್ಯೂಮರರಿ ಹುದ್ದೆ ಎಂದು ಪರಿಗಣಿಸುತ್ತಿರುವುದನ್ನು ನಾವು ಒಪ್ಪುವುದಿಲ್ಲ. ಇದು ಕಾಯ್ದೆಗೆ ವಿರುದ್ಧವಾಗಿದೆ’ ಎಂದು ಹರಿಹಾಯ್ದರು.

ADVERTISEMENT

ಒಕ್ಕೂಟದ ಪ್ರಮುಖ ಆಗ್ರಹಗಳು

* ರಾಜ್ಯಪತ್ರದಲ್ಲಿ 2018ರ ಜೂನ್‌ 23ರಂದು ಕರ್ನಾಟಕ(ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ಜೇಷ್ಠತೆ ವಿಸ್ತರಿಸುವ ಕಾಯ್ದೆ–2017 ಜಾರಿಯಾಗಿದೆ. ಇದರಿಂದ ಬಿ.ಕೆ.ಪವಿತ್ರ ಪ್ರಕರಣದಲ್ಲಿ ಪರಿಷ್ಕರಿಸಿರುವ ಎಲ್ಲ ಜೇಷ್ಠತೆಗಳು ರದ್ದಾಗಿವೆ. ಹಾಗಾಗಿ ಅವುಗಳ ಮೇಲೆ ನೀಡಿರುವ ಹಿಂಬಡ್ತಿ–ಮುಂಬಡ್ತಿಗಳನ್ನು ರದ್ದು ಮಾಡಬೇಕು.

* ಬಿ.ಕೆ.ಪವಿತ್ರ ಪ್ರಕರಣದಲ್ಲಿ ಹಿಂಬಡ್ತಿ ಹೊಂದಿದ ಎಲ್ಲ ಅಧಿಕಾರಿ ಹಾಗೂ ನೌಕರರ ಹಿಂಬಡ್ತಿ ಆದೇಶಗಳನ್ನು, ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಹಿಂಪಡೆಯಬೇಕು.

* ಹಿಂಬಡ್ತಿ ಹೊಂದಿರುವ ಅಧಿಕಾರಿ ಹಾಗೂ ನೌಕರರು ಹಿಂಬಡ್ತಿ ಪೂರ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹುದ್ದೆಗಳಿಗೆ ಮತ್ತು ಸ್ಥಳಗಳಿಗೆ ನಿಯೋಜಿಸಿ ಆದೇಶಿಸಬೇಕು.

* ಹಿಂಬಡ್ತಿಯ ನಂತರ ನಿವೃತ್ತರಾಗಿರುವವರು, ಮರಣ ಹೊಂದಿರುವವರು ಹಿಂಬಡ್ತಿ ಪೂರ್ವದಲ್ಲಿದ್ದ ಹುದ್ದೆಯಲ್ಲಿಯೇ ನಿವೃತ್ತಿ ಆಗಿದ್ದಾರೆ, ಮರಣ ಹೊಂದಿದ್ದಾರೆ ಎಂದು ಪರಿಗಣಿಸಿ, ಎಲ್ಲ ಆರ್ಥಿಕ ಸೌಲಭ್ಯ ಸಿಗುವಂತೆ ಮಾಡಬೇಕು.

* ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಆದೇಶ ಹೊರಡಿಸಿದ ಎರಡು ದಿನಗಳ ಒಳಗಾಗಿ ಎಲ್ಲ ಇಲಾಖೆಗಳು, ಹಿಂಬಡ್ತಿ ಆದೇಶಗಳನ್ನು ಹಿಂಪಡೆದು ಸ್ಥಳನಿಯುಕ್ತಿ ಆದೇಶಗಳನ್ನು ಹೊರಡಿಸಲು ಸ್ಪಷ್ಟವಾಗಿ ಸೂಚಿಸಬೇಕು.

* ಎಲ್ಲ ಹಿಂಬಡ್ತಿ ಆದೇಶಗಳನ್ನು ವಾಪಸ್ಸು ಪಡೆದ ನಂತರ ಕಾಯ್ದೆಯ 5ನೇ ಅಂಶದಲ್ಲಿರುವಂತೆ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ಪ್ರಕಟಿಸಬೇಕು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ದಲಿತ ಸಂಘರ್ಷ ಸಮಿತಿ(ಭೀಮವಾದ) ಮುಖಂಡ ಮೋಹನ್‌ ರಾಜ್‌, ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ್‌ ಕೆರಗೋಡು, ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾದೇವ ಸ್ವಾಮಿ, ಸಮತಾ ಸೈನಿಕ ದಳದ ಅಧ್ಯಕ್ಷ ಚನ್ನಕೃಷ್ಣಪ್ಪ, ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಸವರಾಜ ಕೌತಾಳ್‌, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಬಿ.ಕೃಷ್ಣಪ್ಪ ಸ್ಥಾಪಿತ) ಸಂಚಾಲಕ ಎಂ.ಸೋಮಶೇಖರ್‌ ಹಾಸನ ಅವರು ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.