ADVERTISEMENT

ಒಂದು ದೇಶ, ಒಂದು ಚುನಾವಣೆ |ಮಾಜಿ ರಾಷ್ಟ್ರಪತಿಯಿಂದ ಸುಳ್ಳುಗಳ ವರದಿ: ನಾಗಮೋಹನದಾಸ್

ನಿವೃತ್ತ ನ್ಯಾ. ಆರೋಪ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
<div class="paragraphs"><p>ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಸಿಗೆ ನೀರೆರೆದು ಉದ್ಘಾಟಿಸಿದರು. </p></div>

ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಸಿಗೆ ನೀರೆರೆದು ಉದ್ಘಾಟಿಸಿದರು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಬಳಸಿಕೊಂಡು ‘ಒಂದು ದೇಶ, ಒಂದು ಚುನಾವಣೆ’ಗೆ ಸಂಬಂಧಿಸಿದಂತೆ ಸುಳ್ಳು–ಸುಳ್ಳು ವರದಿಯನ್ನು ಸೃಷ್ಟಿಸಿಕೊಂಡಿದೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ ಆರೋಪಿಸಿದರು.

ADVERTISEMENT

ದಲಿತ ಸಂಘರ್ಷ ಸಮಿತಿಯು ನಗರದಲ್ಲಿ ಬುಧವಾರ ಆಯೋಜಿಸಿದ್ದ,‘ಒಂದು ದೇಶ–ಒಂದು ಚುನಾವಣೆ: ನಿರಂಕುಶ ಪ್ರಜಾಪ್ರಭುತ್ವದತ್ತ ಭಾರತ’ ವಿಚಾರ ಸಂಕಿರಣ ಮತ್ತು ಒಂದು ದಿನದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈಗಿನ ಚುನಾವಣಾ ವ್ಯವಸ್ಥೆಯಿಂದ ರಾಜ್ಯವೊಂದು ಪ್ರತಿ ವರ್ಷ ಸರಾಸರಿ 300 ದಿನ ವ್ಯಯ ಮಾಡಬೇಕಾಗುತ್ತದೆ ಎಂದು ವರದಿ ಹೇಳುತ್ತದೆ. ಇದು ಶುದ್ಧ ಸುಳ್ಳು. ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆಯೂ ವರದಿಯಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ’ ಎಂದರು.

‘ಮೀಸಲಾತಿ ಏರಿಕೆ ಸಂಬಂಧ ವರದಿ ನೀಡಲು ನನ್ನ ನೇತೃತ್ವದಲ್ಲಿ ಆಯೋಗ ರಚಿಸಿದ್ದಾಗ, ಗರಿಷ್ಠ ಮಿತಿಯ ಷರತ್ತನ್ನು ಹೇರಲಾಗಿತ್ತು. ಕೋವಿಂದ್‌ ಅವರಿಗೆ ಈ ಜವಾಬ್ದಾರಿ ನೀಡುವಾಗಲೂ, ಇಂಥದ್ದೇ ಷರತ್ತುಗಳನ್ನು ಹೇರಲಾಗಿತ್ತು. ಸರ್ಕಾರ ತನಗೆ ಹೇಗೆ ಬೇಕೋ ಹಾಗೆ ವರದಿ ಸಿದ್ದಪಡಿಸಿಕೊಂಡಿತು’ ಎಂದರು.

‘ಜಮ್ಮು–ಕಾಶ್ಮೀರ, ಹರಿಯಾಣ ವಿಧಾನಸಭಾ ಚುನಾವಣೆಗಳ ಜತೆಯಲ್ಲೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನೂ ನಡೆಸಲು ಚುನಾವಣಾ ಆಯೋಗಕ್ಕೆ ಅವಕಾಶವಿತ್ತು. ಆದರೆ ಆಯೋಗಕ್ಕೆ ಅಂತಹ ಸಾಮರ್ಥ್ಯವಿಲ್ಲ. ಅಸಮರ್ಥ ಆಯೋಗದಿಂದ ಒಂದು ದೇಶ, ಒಂದು ಚುನಾವಣೆ ನಡೆಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ನಿರ್ಣಯ ಅಂಗೀಕಾರ: ‘ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಅಧಿಕಾರಗಳನ್ನು ಕಸಿದುಕೊಂಡು ಒಂದೇ ಧರ್ಮ, ಸಂಸ್ಕೃತಿ, ಆರ್ಥಿಕತೆ, ಶಿಕ್ಷಣ ವ್ಯವಸ್ಥೆ, ಜಾರಿಗೆ ತರುವ ಉದ್ದೇಶದಿಂದ ಒಂದು ದೇಶ, ಒಂದು ಚುನಾವಣೆ ಜಾರಿಗೆ ತರಲಾಗುತ್ತಿದೆ. ನಂತರದಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನು ನಾಶ ಮಾಡಿ ಒಂದೇ ಪಕ್ಷ ಮತ್ತು ಒಬ್ಬನೇ ನಾಯಕನನ್ನು ಸೃಷ್ಟಿಸುವ ಹುನ್ನಾರವಿದು. ಇದನ್ನು ಖಂಡಿಸಬೇಕು’ ಎಂದು ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಸಂವಿಧಾನವನ್ನು ರದ್ದುಪಡಿಸಬೇಕು ಎಂಬ ಕೇಂದ್ರ ಸರ್ಕಾರದ ಹುನ್ನಾರದ ಭಾಗವಾಗಿಯೇ ‘ಒಂದು ದೇಶ ಒಂದು ಚುನಾವಣೆ’ ಜಾರಿಗೆ ತರಲಾಗುತ್ತಿದೆ
–ಎ.ನಾರಾಯಣ, ಅಂಕಣಕಾರ
ವರದಿ ಬಿಡುಗಡೆ ಮಾಡಿ ಡಿಜಿಟಲ್‌ ರೂಪದಲ್ಲಿ ಆಕ್ಷೇಪ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿತ್ತು. ಆಕ್ಷೇಪ ಸಲ್ಲಿಸಲು ಅವಕಾಶವೇ ಇಲ್ಲವಾಯಿತು
–ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಚಾಲಕ ದಲಿತ ಸಂಘರ್ಷ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.