ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದ್ದು, ತಿಂಗಳ ಅಂತ್ಯದ ವೇಳೆಗೆ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ.
ರಾಜ್ಯದ ಪ್ರಮುಖ 13 ಜಲಾಶಯಗಳ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 865.20 ಟಿಎಂಸಿ ಅಡಿಗಳಿದ್ದು, ಈಗ 202.95 ಟಿಎಂಸಿ ಅಡಿಗಳಷ್ಟಿದೆ. ಕಳೆದ ವರ್ಷ ಇದೇ ವೇಳೆಗೆ 246.24 ಟಿಎಂಸಿ ಅಡಿಗಳಷ್ಟು ಸಂಗ್ರಹ ಇತ್ತು. ಒಟ್ಟು ಸಾಮರ್ಥ್ಯದ ಶೇ 23 ರಷ್ಟು ಮಾತ್ರ ನೀರು ಲಭ್ಯವಿದೆ.
ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆಆರ್‌ಎಸ್ ಮತ್ತು ಕಬಿನಿಯ ಒಟ್ಟು ಸಾಮರ್ಥ್ಯ 114.57 ಟಿಎಂಸಿ ಅಡಿ ಇದ್ದು, ಈಗ ಶೇ 38.66 ಟಿಎಂಸಿ ಅಡಿ ಇದ್ದು, ಕಳೆದ ವರ್ಷ ಇದೇ ವೇಳೆಯಲ್ಲಿ 56.44 ಟಿಎಂಸಿ ಅಡಿ ಇತ್ತು.
ಕೃಷ್ಣಾ ಜಲಾನಯನ ಪ್ರದೇಶದ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳ ಒಟ್ಟು ಸಾಮರ್ಥ್ಯ 422.45 ಟಿಎಂಸಿ ಅಡಿ ಇದ್ದು, ಈಗ 88.57 ಟಿಎಂಸಿ ಅಡಿ ನೀರು ಇದೆ. ಕಳೆದ ವರ್ಷ ಇದೇ ವೇಳೆ 123.25 ಟಿಎಂಸಿ ಅಡಿ ನೀರು ಇತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಂಗಳವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ನೀರಿನ ಸಂಗ್ರಹ ಕುಸಿತಕ್ಕೆ ಕಾರಣ?:
2021 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲೂ ಭಾರಿ ಮಳೆ ಆಗಿತ್ತು. ಆದರೆ, 2022 ರ ಜೂನ್ – ಜುಲೈ ಬಳಿಕ ಅಂದರೆ, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಮಳೆ ಆಗಲಿಲ್ಲ. ಇದರಿಂದ ಜಲಾಶಯಗಳಿಗೆ ನೀರಿನ ಹರಿವಿನ ಪ್ರಮಾಣ ಕುಸಿತವಾಯಿತು. ಇದರಿಂದಾಗಿ, ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹವೂ ಕಡಿಮೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.