ADVERTISEMENT

ಕಾರು ಅಪಘಾತ: ನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆ, ಬಲಗೈಗೆ 20ಕ್ಕೂ ಹೆಚ್ಚು ಹೊಲಿಗೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 17:27 IST
Last Updated 24 ಸೆಪ್ಟೆಂಬರ್ 2018, 17:27 IST
ಕೈಗಡಗ ಧರಿಸಿರುವ ದರ್ಶನ್‌; ಅಪಘಾತದಲ್ಲಿ ಕೈಗಡಗ ಬಲಗೈಗೆ ಮೂಳೆಗೆ ಒತ್ತಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ
ಕೈಗಡಗ ಧರಿಸಿರುವ ದರ್ಶನ್‌; ಅಪಘಾತದಲ್ಲಿ ಕೈಗಡಗ ಬಲಗೈಗೆ ಮೂಳೆಗೆ ಒತ್ತಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ   

ಮೈಸೂರು: ಮೈಸೂರು: ನಗರದ ಹೊರವಲಯದಲ್ಲಿ ಸೋಮವಾರ ನಸುಕಿನಲ್ಲಿ ನಡೆದ ಕಾರು ಅಪಘಾತದಲ್ಲಿ ನಟರಾದ ದೇವರಾಜ್, ದರ್ಶನ್, ಪ್ರಜ್ವಲ್‌ ದೇವರಾಜ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಒಡೆಯ’ ಚಿತ್ರದ ಚಿತ್ರೀಕರಣ ಮುಗಿಸಿ ತೆರಳುತ್ತಿದ್ದಾಗ ದರ್ಶನ್ ಅವರ ಕಾರು ನಿಯಂತ್ರಣ ತಪ್ಪಿ ರಿಂಗ್‌ ರಸ್ತೆಯ ಜೆಎಸ್ಎಸ್ ಹರ್ಬನ್ ಹಾತ್‌ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ವಿದ್ಯುತ್‌ ಕಂಬ ಉರುಳಿ, ಕಾರು ಜಖಂಗೊಂಡಿದೆ. ರಾಯ್ ಅಂಥೋಣಿ ಕಾರು ಚಾಲನೆ ಮಾಡುತ್ತಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದರ್ಶನ್ ಅವರ ಬಲ ಮುಂಗೈ ಮೂಳೆ ಮುರಿದಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ದೇವರಾಜ್ ಅವರ ಎಡಗೈ ಬೆರಳಿಗೆ ತೀವ್ರ ಗಾಯವಾಗಿದೆ. ಪ್ರಜ್ವಲ್ ದೇವರಾಜ್, ರಾಯ್ ಅಂಥೋಣಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ADVERTISEMENT

ದೂರು ನೀಡದೇ ಮುಚ್ಚಿಟ್ಟರು: ನಸುಕಿನ 2.30ರಲ್ಲಿ ಅಪಘಾತ ಸಂಭವಿಸಿದೆ. ಇವರ ಹಿಂದೆ ಬರುತ್ತಿದ್ದ ಸ್ನೇಹಿತರು ಹಾಗೂ ಗನ್‌ಮ್ಯಾನ್‌ಗಳು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡದೇ ಕಾರನ್ನು ಇನ್ಫೋಸಿಸ್ ಬಳಿ ಬಚ್ಚಿಟ್ಟರು. ಮಾಧ್ಯಮಗಳಿಂದ ವಿಷಯ ತಿಳಿದ ಪೊಲೀಸರು ಆಸ್ಪತ್ರೆಗೆ ಬಂದು ಮಾಹಿತಿ ಪಡೆದರು. ಬಳಿಕ, ದರ್ಶನ್ ಗನ್‌ಮ್ಯಾನ್‌ ದೂರು ನೀಡಿದರು. ಪೊಲೀಸರು ಕಾರನ್ನು ಪತ್ತೆಹಚ್ಚಿ ಠಾಣೆಗೆ ತಂದರು. ಆದರೆ, ಕಾರಿನ ನಂಬರ್‌ ಪ್ಲೇಟ್ ತೆಗೆದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಪಘಾತ ನಡೆದ 14 ಗಂಟೆಗಳ ನಂತರ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇದೊಂದು ಸ್ವಯಂ ಅಪಘಾತ. ಪ‍್ರಕರಣ ದಾಖಲಿಸಿಕೊಂಡು ಕಾರು ವಶಪಡಿಸಿಕೊಳ್ಳಲಾಗಿದೆ. ಇತರೆ ಪ್ರಕರಣಗಳನ್ನು ಹೇಗೆ ಪರಿಗಣಿಸುತ್ತೇವೋ ಹಾಗೇ ಇದನ್ನೂ ಪರಿಗಣಿಸಲಾಗಿದೆ’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ.ವಿಕ್ರಮ ವಿ.ಆಮ್ಟೆ ತಿಳಿಸಿದ್ದಾರೆ.

ತಡರಾತ್ರಿ ಎಲ್ಲಿಗೆ ಹೋಗಿದ್ದರು?: ಭಾನುವಾರವಷ್ಟೇ ಅರಮನೆಯಲ್ಲಿರುವ ದಸರಾ ಗಜಪ‍ಡೆಯ ಮಾವುತರು ಮತ್ತು ಕಾವಾಡಿಗಳ ಜತೆ ದರ್ಶನ್ ಭೋಜನ ಸವಿದಿದ್ದರು. ನಂತರ, ದೇವರಾಜ್ ಅವರ ಜನ್ಮದಿನದ ಪಾರ್ಟಿ ಖಾಸಗಿ ಹೋಟೆಲ್‌ನಲ್ಲಿ ಇತ್ತು. ಅದನ್ನು ಮುಗಿಸಿಕೊಂಡು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ನಿರಾಕರಿಸಿರುವ ಚಿತ್ರ ನಿರ್ಮಾಪಕ ಹಾಗೂ ವಿಧಾನಪರಿಷತ್ ಸದಸ್ಯ ಸಂದೇಶ್‌ ನಾಗರಾಜ್, ‘ಒಡೆಯ’ ಚಿತ್ರದ ಚಿತ್ರೀಕರಣ ಮುಗಿಸಿ ಬರುವಾಗ ಅವಘಡ ನಡೆದಿದೆ. ಯಾವುದೇ ಪಾರ್ಟಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

’ಸಣ್ಣ ಪುಟ್ಟ ಗಾಯಗಳಿವೆ, ಆತಂಕ ಪಡಬೇಕಾದ ಅಗತ್ಯವಿಲ್ಲ. ದರ್ಶನ್‌ ಸೇರಿ ಎಲ್ಲರೂ ಸುರಕ್ಷಿವಾಗಿದ್ದಾರೆ. ಇವತ್ತೇ ಐಸಿಯುನಿಂದ ವಾರ್ಡ್‌ಗೆ ವರ್ಗಾಯಿಸಲಾಗುತ್ತದೆ’ ಎಂದು ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ.

(ಅಪಘಾತಕ್ಕೆ ಒಳಗಾದ ದರ್ಶನ್‌ ಸಂಚರಿಸುತ್ತಿದ್ದ ಕಾರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗುತ್ತಿದೆ)

ಅಪಘಾತದಲ್ಲಿ ಪಲ್ಟಿಯಲ್ಲಿಯಾಗಿದ್ದ ಕಾರನ್ನು ಸ್ಥಳೀಯರ ನೆರವಿನೊಂದಿಗೆ ಮೇಲೆತ್ತಿ ಸ್ಥಳಾಂತರಿಸಲಾಗಿದೆ. ದರ್ಶನ್‌ ಪ್ರಯಾಣಿಸುತ್ತಿದ್ದ ಕಾರಿನ ಹಿಂದೆ ಬಂದ ಇತರೆ ನಟರ ಕಾರುಗಳು ಅಪಘಾತದಲ್ಲಿ ಗಾಯಗೊಂಡವರನ್ನು ಕರೆದೊಯ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ನಟ ದರ್ಶನ್ ಕಾರು ಅಪಘಾತಕ್ಕೀಡಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಹಾಗೂ ಮೈಸೂರು ಗ್ರಾಮಾಂತರ, ವಿ.ವಿ.ಪುರಂ ಸಂಚಾರ ಠಾಣಾ ಪೊಲೀಸರಿಗೆ ಯಾವುದೇ ಮಾಹಿತಿ ದೊರೆತಿಲ್ಲ.

(ಕೊಲಂಬಿಯಾ ಏಷಿಯಾ ಆಸ್ಪತ್ರೆ ‌ಮುಂದೆ ಸೇರಿರುವ ನಟ ದರ್ಶನ್ ಅಭಿಮಾನಿಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.