ADVERTISEMENT

ಪವಿತ್ರಾಗೌಡಗೆ 200ಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಸಂದೇಶ ಕಳುಹಿಸಿದ್ದ ರೇಣುಕಸ್ವಾಮಿ

ಐದು ತಿಂಗಳದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೊ: ಪ್ರತಿ ಸಂದೇಶ ಓದಿ ಹಲ್ಲೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 1:26 IST
Last Updated 29 ಜೂನ್ 2024, 1:26 IST
<div class="paragraphs"><p>ರೇಣುಕಸ್ವಾಮಿ</p></div>

ರೇಣುಕಸ್ವಾಮಿ

   

ಬೆಂಗಳೂರು: ‘ದರ್ಶನ್‌ ಅವರ ಆಪ್ತೆ ಪವಿತ್ರಾಗೌಡ ಅವರಿಗೆ ರೇಣುಕಸ್ವಾಮಿ ಕಳೆದ ಐದು ತಿಂಗಳಿಂದ ಸಂದೇಶ ಕಳುಹಿಸುತ್ತಿದ್ದರು’ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಪವಿತ್ರಾಗೌಡ ಅವರನ್ನು ಫೆಬ್ರುವರಿಯಿಂದಲೂ ಇನ್‌ಸ್ಟಾಗ್ರಾಮ್‌ ಮೂಲಕವೇ ಫಾಲೊ ಮಾಡುತ್ತಿದ್ದರು ಎಂಬುದೂ ಗೊತ್ತಾಗಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ, ವಿನಯ್‌, ಪ್ರದೋಷ್‌ ಸೇರಿದಂತೆ 17 ಮಂದಿ ನ್ಯಾಯಾಂಗ ಬಂಧನಲ್ಲಿದ್ದು ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. 

ADVERTISEMENT

ಸಾಕ್ಷ್ಯನಾಶಪಡಿಸುವ ಉದ್ದೇಶದಿಂದ ಆರೋಪಿಗಳು, ರೇಣುಕಸ್ವಾಮಿಗೆ ಸೇರಿದ ಮೊಬೈಲ್‌ ಅನ್ನು ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಬಳಿಯ ರಾಜಕಾಲುವೆಗೆ ಎಸೆದಿದ್ದರು. ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಪೌರ ಕಾರ್ಮಿಕರನ್ನು ಬಳಸಿ ಮೊಬೈಲ್‌ಗಾಗಿ ಶೋಧ ನಡೆಸಲಾಗಿತ್ತು. ಅಲ್ಲದೇ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದ್ದರು. ಆದರೂ ಮೊಬೈಲ್‌ ಇನ್ನೂ ಪತ್ತೆಯಾಗಿಲ್ಲ.

‘ನ್ಯಾಯಾಲಯದ ಅನುಮತಿ ಪಡೆದು ರೇಣುಕಸ್ವಾಮಿ ಬಳಸುತ್ತಿದ್ದ ನಂಬರ್‌ನಲ್ಲಿ ಮತ್ತೊಂದು ಸಿಮ್ ಖರೀದಿಸಿ ತನಿಖೆ ನಡೆಸಲಾಗುತ್ತಿದೆ. ದತ್ತಾಂಶ ಪಡೆದುಕೊಳ್ಳಲಾಗುತ್ತಿದೆ. ಕೊಲೆಯಾದ ವ್ಯಕ್ತಿ ಯಾವ್ಯಾವ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದರು ಎಂಬುದನ್ನೂ ಪತ್ತೆ ಹಚ್ಚಲಾಗುತ್ತಿದೆ. ಇದು ಸೂಕ್ಷ್ಮ ಪ್ರಕರಣವಾಗಿದ್ದು, ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ರೇಣುಕಸ್ವಾಮಿ ಅವರು ಸಾಮಾನ್ಯ ಚಾಟಿಂಗ್ ನಡೆಸಿದ್ದಾರೆ. ನಂತರ, ಕೆಲವು ಅಶ್ಲೀಲ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಪವಿತ್ರಾಗೌಡ ಪ್ರತಿಕ್ರಿಯಿಸಿರಲಿಲ್ಲ. ನಂತರ, 200ಕ್ಕೂ ಹೆಚ್ಚು ಸಂದೇಶ ಕಳುಹಿಸಿದ್ದರು. ಜತೆಗೆ ಅಶ್ಲೀಲ ಚಿತ್ರಗಳನ್ನೂ ಕಳುಹಿಸಿದ್ದರು. ಆಗ ಪವಿತ್ರಾಗೌಡ ಅವರು ಆ ಅಕೌಂಟ್‌ ಬ್ಲಾಕ್‌ ಮಾಡಿ, ತಮ್ಮ ವ್ಯವಸ್ಥಾಪಕ ಪವನ್‌ಗೆ ತಿಳಿಸಿದ್ದರು. ಪವನ್ ಅವರು ದರ್ಶನ್‌ಗೆ ಹೇಳಿದ್ದರು’ ಎಂದು ತನಿಖಾಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.

‘ಪವಿತ್ರಾಗೌಡ ಅವರು ಖಾತೆಯನ್ನು ಬ್ಲಾಕ್ ಮಾಡಿದ ಬಳಿಕ ಕೊಲೆಯಾದ ವ್ಯಕ್ತಿ ನಕಲಿ ಖಾತೆ ತೆರೆದು ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಪವಿತ್ರಾ ಅವರ ಮೊಬೈಲ್‌ ಅನ್ನು ಜಪ್ತಿ ಮಾಡಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಪ್ರಕರಣ ಸಂಬಂಧ ಕೆಲವು ಮಹತ್ವದ ಮಾಹಿತಿ ಸಂಗ್ರಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಜೂನ್ 8ರಂದು ಪಟ್ಟಣಗೆರೆಯ ಶೆಡ್‌ಗೆ ರೇಣುಕಸ್ವಾಮಿ ಅವರನ್ನು ಕರೆತರಲಾಗಿತ್ತು. ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬ ಆರೋಪವಿದೆ.

‘ಹಲ್ಲೆ ವೇಳೆ ರೇಣುಕಸ್ವಾಮಿ ಮೊಬೈಲ್ ಅನ್ನು ಆರೋಪಿ ಪವನ್‌ಗೆ ನೀಡಿ ಪವಿತ್ರಾಗೌಡಗೆ ಕಳುಹಿಸಿದ್ದ ಸಂದೇಶಗಳನ್ನು ಓದುವಂತೆ ಹೇಳಿದ್ದರು. ಪ್ರತಿ ಸಂದೇಶ ಓದಿದಾಗಲೂ ಆರೋ‍ಪಿಗಳು ಹಲ್ಲೆ ನಡೆಸಿದ್ದಾರೆ’ ಎಂದು ಗೊತ್ತಾಗಿದೆ.

‘ಇನ್‌ಸ್ಟಾಗ್ರಾಮ್‌ ನಕಲಿ ಖಾತೆಯ ಮಾಹಿತಿಗಾಗಿ ಕಂಪನಿಗೆ ಪತ್ರ ಬರೆದು ಮಾಹಿತಿ ಕೇಳಲಾಗಿತ್ತು. ಕಂಪನಿ ಕಡೆಯಿಂದ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ’ ಎಂದು ತನಿಖಾಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.

‘ಜೈಲು ಬಳಿಗೆ ಬರುವುದು ಬೇಡ’: ದರ್ಶನ್‌ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿಗೆ ಭೇಟಿ ನೀಡಿ ಅವರನ್ನು ಮಾತನಾಡಿಸಬೇಕು ಎಂದು ಹಲವು ಅಭಿಮಾನಿಗಳು ಜೈಲಿನತ್ತ ಬರುತ್ತಿದ್ದಾರೆ.

‘ಯಾರೂ ಜೈಲಿನತ್ತ ಬರುವುದು ಬೇಡ. ನಿಯಮಗಳ ಪ್ರಕಾರ ಭೇಟಿ ಸಾಧ್ಯವಿಲ್ಲ. ಹೀಗಾಗಿ, ಯಾರು ಕೂಡ ಜೈಲಿನ ಬಳಿ ಬರಬೇಡಿ’ ಎಂದು ಜೈಲು ಸಿಬ್ಬಂದಿ ಮೂಲಕ ದರ್ಶನ್‌ ಮನವಿ ಮಾಡಿಕೊಂಡಿದ್ದಾರೆ.

ದರ್ಶನ್ ಅವರ ಮನವಿಯನ್ನು ಜೈಲು ಸಿಬ್ಬಂದಿ, ಪರಪ್ಪನ ಅಗ್ರಹಾರದ ಚೆಕ್‌ಪೋಸ್ಟ್‌ನಲ್ಲಿರುವ ಸಿಬ್ಬಂದಿಗೆ ತಿಳಿಸಿದ್ದು ಅಲ್ಲಿಗೆ ಬರುವ ಅಭಿಮಾನಿಗಳಿಗೆ ಬುದ್ಧಿಹೇಳಿ ಅಲ್ಲಿಂದಲೇ ಕಳುಹಿಸುತ್ತಿದ್ಧಾರೆ ಎಂದು ಗೊತ್ತಾಗಿದೆ. 

ರೇಣುಕಸ್ವಾಮಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.