ಬಳ್ಳಾರಿ: ನಟ ದರ್ಶನ್ ಅವರು ಶೌಚಕ್ಕಾಗಿ ಸರ್ಜಿಕಲ್ ಚೇರ್ ಕೇಳಿರುವುದಾಗಿ ಕಾರಗೃಹ ಇಲಾಖೆಯ ಉತ್ತರ ವಲಯ ಉಪಮಮಹಾನಿರೀಕ್ಷಿಕ ಟಿ.ಪಿ ಶೇಷ ತಿಳಿಸಿದ್ದಾರೆ.
ಇಲಾಖೆ ಸೂಚನೆ ಮೇರೆಗೆ ಶನಿವಾರ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದ ಅವರು ಇಲ್ಲಿನ ವ್ಯವಸ್ಥೆ ಪರಿಶೀಲಿಸಿದರು.
'ಜೈಲಿನಲ್ಲಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳ ಬೇಕು ಎಂದು ನಾನು ನಿರ್ದೇಶನ ನೀಡಿದ್ದೆ. ಅವುಗಳ ಪಾಲನೆ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿದ್ದೇನೆ. ಅಧಿಕಾರಿಗಳು ಸೂಚನೆಯನ್ನು ಸಮರ್ಪಕವಾಗಿ ಪಾಲಿಸುತ್ತಿದ್ದಾರೆ' ಎಂದರು.
ಆಹಾರ ತೆಗೆದುಕೊಳ್ಳದಿರುವ ಬಗ್ಗೆ ದರ್ಶನ್ ಅವರನ್ನು ವಿಚಾರಿಸಲಾಯಿತು. 'ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇದೆ. ಬೆನ್ನೆಲುಬು ಸಮಸ್ಯೆ ಇರುವ ಕಾರಣ ಶೌಚಕ್ಕೆ ಕಷ್ಟವಾಗುತ್ತದೆ' ಎಂದು ಅವರು ಹೇಳಿದ್ದಾರೆ. ವೆಸ್ಟ್ರನ್ ಕಮೋಡ್ ಒದಗಿಸಿಕೊಡಿ ಅಥವಾ ಸರ್ಜಿಕಲ್ ಚೇರ್ ಆದರೂ ಕೊಡಿ ಎಂದು ದರ್ಶನ್ ಕೇಳಿರುವುದಾಗಿ ಶೇಷ ತಿಳಿಸಿದರು.
'ಕುಟುಂಬಸ್ಥರು ಮತ್ತು ಅವರ ವಕೀಲರನ್ನು ಹೊರತುಪಡಿಸಿ ಬೇರೆಯಾರಿಗೂ ದರ್ಶನ್ ರನ್ನು ನೋಡಲು ಅವಕಾಶ ನೀಡುವುದಿಲ್ಲ. ರಾಜಕೀಯ ಒತ್ತಡಗಳಿಗೆ ಮಣಿಯುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
ಜೈಲಿನಲ್ಲಿ ಮೊಬೈಲ್ ಒಯ್ಯಲು ಸಿಬ್ಬಂದಿ ಸೇರಿದಂತೆ ಯಾರಿಗೂ ಅವಕಾಶ ನೀಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಬಳ್ಳಾರಿ ಜೈಲಿನಲ್ಲಿ ಮೊಬೈಲ್ ಜಾಮಾರ್ ಇಲ್ಲ. ಅತ್ಯಾಧುನಿಕ ಜಾಮರ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.
ಒಂದು ವೇಳೆ ದರ್ಶನ್ ಟಿ.ವಿ ಕೇಳಿದರೆ ಕೊಡಲಾಗುವುದು. ಇತರ ಕೈದಿಗಳಿಗೂ ಈ ವ್ಯವಸ್ಥೆ ಇದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.