ADVERTISEMENT

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ಮುಂದುವರಿಕೆ ಅಸಾಧ್ಯ: ಎಂ.ಬಿ. ಪಾಟೀಲ

ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರನ್ನು ಕೃಷಿ ರಾಯಭಾರಿಯಾಗಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ‌ ಹೇಳಿದರು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2024, 8:05 IST
Last Updated 14 ಜೂನ್ 2024, 8:05 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಹುಬ್ಬಳ್ಳಿ: ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರನ್ನು ಕೃಷಿ ರಾಯಭಾರಿಯಾಗಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಗೆ ವಿಐಪಿ ಸೌಕರ್ಯ ನೀಡಿಲ್ಲ. ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆಯಾಗುತ್ತದೆ‌ ಎಂದರು.

ಸರ್ಕಾರದ ಹಸ್ತಕ್ಷೇಪವಿಲ್ಲ: ಪೋಕ್ಸೊ ಪ್ರಕರಣದಲ್ಲಿ ಬಿ.ಎಸ್. ಯಡಿಯೂರಪ್ಪ ಬಂಧನಕ್ಕೆ ಜಾಮೀನುರಹಿತ ವಾರೆಂಟ್ ಹೊರಡಿಸಲು ನ್ಯಾಯಾಲಯ ಆದೇಶಿಸಿದೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವ, ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ADVERTISEMENT

ಪೋಸ್ಕೊ ಪ್ರಕರಣ ಅತ್ಯಂತ ಗಂಭೀರವಾದದ್ದು. ಕಾಯ್ದೆ ಅನ್ವಯ ನ್ಯಾಯಾಲಯ ಆದೇಶ ನೀಡಿದೆ. ಅವರು ತಪ್ಪು ಮಾಡಿದ್ದಾರೋ, ಇಲ್ಲವೋ ಎಂದು ನ್ಯಾಯಾಲಯ ತೀರ್ಮಾನ ಮಾಡುತ್ತದೆಯೇ ಹೊರತು ಸರ್ಕಾರ ನಿರ್ಧಾರ ಮಾಡುವುದಿಲ್ಲ ಎಂದರು.

ಮೂವರು ಉಪಮುಖ್ಯಮಂತ್ರಿ ನೇಮಕ ಮಾಡುವಂತೆ ಸಚಿವ ಕೆ.ಎನ್. ರಾಜಣ್ಣ ಹೇಳಿರುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಅಲ್ಲಿ ನಮ್ಮ ಅಭಿಪ್ರಾಯ ತಿಳಿಸುವೆವು. ಲೋಕಸಭಾ ಚುನಾವಣೆಯನ್ನು ಎಲ್ಲರೂ ಗಂಭಿರವಾಗಿ ಎದುರಿಸಿದ್ದಾರೆ. ಹಾಗಾಗಿ, ತಲೆದಂಡ ಪ್ರಶ್ನೆ ಉದ್ಭವಿಸದು. ಹಿನ್ನಡೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಚರ್ಚಿಸುತ್ತೇವೆ ಎಂದರು.

ಮಹಾರಾಷ್ಟ್ರದಲ್ಲಿ ಸರ್ಕಾರ ಬೀಳುತ್ತಿದ್ದು, ಬಿಜೆಪಿಯವರು ಮೊದಲು ಅದನ್ನು ನೋಡಿಕೊಳ್ಳಲಿ. ಕರ್ನಾಟಕದಲ್ಲಿ ಸರ್ಕಾರ ಉರುಳಿಸಲು ಅವರಿಗೆ 60 ಶಾಸಕರು ಬೆಂಬಲ ಬೇಕು. ಅವರು ರಾಜೀನಾಮೆ ನೀಡಿ, ಚುನಾವಣೆ ಎದುರಿಸಬೇಕು. ನಮ್ಮ ಯಾವ ಶಾಸಕರೂ ಬಿಜೆಪಿಗೆ ಬೆಂಬಲ ನೀಡುವುದಿಲ್ಲ. ಇದೆಲ್ಲ ಹುಡುಗಾಟವಲ್ಲ. ಬಿಜೆಪಿ ಹಾಗೂ ಜೆಡಿಎಸ್ ಶಾಸಕರೇ ನಮ್ಮೊಂದಿಗಿದ್ದಾರೆ ಎಂದು ಹೇಳಿದರು.

ಕುರ್ಚಿ ಖಾಲಿ‌ ಇಲ್ಲ: ಮುಖ್ಯಮಂತ್ರಿ ಆಗುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಅದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಸಿಎಂ ಆಗಲು ಶಾಸಕರ ಬೆಂಬಲ ಬೇಕು. ಸದ್ಯಕ್ಕೆ ಆ ಪ್ರಶ್ನೆಯೇ ಇಲ್ಲ. ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.