ADVERTISEMENT

ದರ್ಶನ್ ಚಿಕಿತ್ಸಾ ಮಾಹಿತಿ ಅಲಭ್ಯ: ಪ್ರಾಸಿಕ್ಯೂಷನ್‌ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:58 IST
Last Updated 21 ನವೆಂಬರ್ 2024, 15:58 IST
ದರ್ಶನ್
ದರ್ಶನ್   

ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಅವರಿಗೆ ಬೆನ್ನುಹುರಿ ನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂಬ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿರುವರಾದರೂ ಈತನಕ ಆಸ್ಪತ್ರೆಯಲ್ಲಿ ಯಾವ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ’ ಎಂದು ಪ್ರಾಸಿಕ್ಯೂಷನ್‌, ಹೈಕೋರ್ಟ್‌ನಲ್ಲಿ ಬಲವಾಗಿ ಆಕ್ಷೇಪಿಸಿದೆ.

ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, 2ನೇ ಆರೋಪಿ ದರ್ಶನ್‌, 6ನೇ ಆರೋಪಿ ಜಗದೀಶ್‌, 7ನೇ ಆರೋಪಿ ಅನುಕುಮಾರ್ ಅಲಿಯಾಸ್‌ ಅನು, 11ನೇ ಆರೋಪಿ ನಾಗರಾಜ್‌ ಮತ್ತು 12ನೇ ಆರೋಪಿ ಎಂ.ಲಕ್ಷ್ಮಣ್‌, ಪ್ರತ್ಯೇಕವಾಗಿ ಸಲ್ಲಿಸಿದ್ದ ನಿಯಮಿತ (ರೆಗ್ಯುಲರ್‌) ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್, ‘ಪ್ರಕರಣದ ಪ್ರಮುಖ ಮತ್ತು ಎರಡನೇ ಆರೋಪಿಯಾದ ದರ್ಶನ್‌ ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ಪಡೆದಿದ್ದಾರೆ. ಆದರೆ, ಕೋರ್ಟ್‌ ಜಾಮೀನು ನೀಡುವಾಗ; ಯಾವಾಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು, ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ತದನಂತರದಲ್ಲಿ ಏನಾದರೂ ಚಿಕಿತ್ಸೆ ಮುಂದುವರಿಯುತ್ತದೆಯೋ ಹೇಗೆ ಎಂಬ ವಿವರಗಳನ್ನು ಬಿಡುಗಡೆಯಾದ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಷರತ್ತು ವಿಧಿಸಿತ್ತು. ಆದರೆ, ಈ ಷರತ್ತಿಗೆ ಅನುಗುಣವಾಗಿ ಅವರು ಈತನಕ ಪ್ರಾಸಿಕ್ಯೂಷನ್‌ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಬದಲಾಗಿ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ನೀಡಿದೆ’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ADVERTISEMENT

‘ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಆ ಚಿಕಿತ್ಸೆಯ ಮುನ್ನೋಟವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಷರತ್ತು ಇದೆಯಾದರೂ, ಅರ್ಜಿದಾರರು ಈಗ ನಿಯಮಿತ ಜಾಮೀನು ಅರ್ಜಿ ಸಲ್ಲಿಸಿದ್ದು ಈ ಕುರಿತಾದ ಕಾನೂನು ಔಚಿತ್ಯದ ನಿಷ್ಕರ್ಷೆ ಅಗತ್ಯವಿದೆ’ ಎಂದರು.

ಅಂತೆಯೇ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇದ್ದ ಮುಂದುವರಿದ ತನಿಖೆಯನ್ನು ಪೂರ್ಣಗೊಳಿಸಲಾಗಿದ್ದು, 1,200ಕ್ಕೂ ಹೆಚ್ಚಿನ ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಶುಕ್ರವಾರ (ನ.22) ವಿಚಾರಣಾ ನ್ಯಾಯಾಲಯಕ್ಕೆ ಇದನ್ನು ನಿವೇದಿಸಲಾಗುವುದು. ಅದನ್ನು ನೋಡಿ ಅರ್ಜಿದಾರರ ಪರ ವಕೀಲರು ತಮ್ಮ ವಾದ ಮುಂದುವರಿಸಬಹುದು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ದರ್ಶನ್‌ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್‌, ‘ಕೋರ್ಟ್‌ ಈಗಾಗಲೇ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿಯಾಗಿದೆ. ಅದನ್ನು ವಾಪಸು ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದರು.

ಇದಕ್ಕೆ ನ್ಯಾಯಪೀಠ, ‘ಒಂದು ವೇಳೆ ಷರತ್ತು ಪಾಲನೆ ಆಗಲಿಲ್ಲ ಎಂದಾದರೆ ಜಾಮೀನು ವಾಪಸು ಪಡೆಯಲಾಗುವುದು’ ಎಂದು ಸ್ಪಷ್ಟಪಡಿಸಿತಲ್ಲದೆ, ‘ದರ್ಶನ್‌ ಪಡೆದಿರುವ ವೈದ್ಯಕೀಯ ಚಿಕಿತ್ಸೆಯ ವರದಿಯನ್ನು ಪ್ರಾಸಿಕ್ಯೂಷನ್‌ಗೆ ನೀಡಬೇಕು’ ಎಂದು ರಿಜಿಸ್ಟ್ರಿಗೆ ಆದೇಶಿಸಿ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿತು.

ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌, ದರ್ಶನ್‌ ಪರ ಎಸ್‌.ಸುನಿಲ್ ಕುಮಾರ್, ಎಂ.ಲಕ್ಷ್ಮಣ್‌ ಪರ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌, ಜಗದೀಶ್‌ ಮತ್ತು ಅನುಕುಮಾರ್‌ ಪರ ಹೈಕೋರ್ಟ್‌ ವಕೀಲ ರಾಜವರ್ಧನ ರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.