ಬೆಂಗಳೂರು: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಹಣವನ್ನು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ದಲಿತರಿಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಪದಾಧಿಕಾರಿಗಳು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮನೆಗೆ ಬುಧವಾರ ಮುತ್ತಿಗೆ ಹಾಕಿದರು.
ದಲಿತರನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ವಿಶೇಷವಾಗಿ ಮೀಸಲಿರಿಸಿರುವ ಹಣವನ್ನು ಸಾಮಾನ್ಯ ಕಾರ್ಯಕ್ರಮಗಳಿಗೆ ಬಳಸುತ್ತಿರುವುದು ಸರ್ಕಾರದ ನಯವಂಚಕತನಕ್ಕೆ ಸಾಕ್ಷಿಯಾಗಿದೆ. ದಲಿತರ ಮೀಸಲು ಹಣ ದುರುಪಯೋಗವಾಗದಂತೆ ತಡೆಯಲು ಸರ್ಕಾರ ಕೂಡಲೇ ಎಸ್‌ಸಿಎಸ್‌ಪಿ–ಟಿಎಸ್‌ಪಿ ಕಾಯ್ದೆಯ ಸೆಕ್ಷನ್ ‘7ಸಿ’ ರದ್ದುಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ನಿಗಮಗಳಲ್ಲಿ ದಲಿತರ ಮೀಸಲು ಹಣ ಕಾಯಲು ಕಾನೂನುಬದ್ದವಾದ ಕಾವಲು ಸಮಿತಿಗಳನ್ನು ರಚನೆ ಮಾಡಬೇಕು. ಹೊರಗುತ್ತಿಗೆ ನೇಮಕಾತಿ ಮೀಸಲಾತಿಗೆ ವಿಧಿಸಿರುವ ಅವೈಜ್ಞಾನಿಕ ನಿಯಮಗಳನ್ನು ರದ್ದುಗೊಳಿಸಬೇಕು’ ಎಂದು ಇಂದೂಧರ ಹೊನ್ನಾಪುರ ಆಗ್ರಹಿಸಿದರು.
‘ಸಂವಿಧಾನ ವಿರೋಧಿ ಮನಃಸ್ಥಿತಿಗಳನ್ನು ದೂರ ಇಡಲು ಅನಿವಾರ್ಯವಾಗಿ ಕಾಂಗ್ರೆಸ್ ಬೆಂಬಲಿಸಿದ ದಲಿತರೇ ಇಂದು ಪಶ್ಚಾತ್ತಾಪ ಪಡುವಂತಾಗಿದೆ. ಈ ಲೋಪಗಳನ್ನು ಮುಖ್ಯಮಂತ್ರಿ ಸರಿಪಡಿಸಬೇಕು. ಇಲ್ಲದೇ ಇದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ’ ಎಂದು ಮಾವಳ್ಳಿ ಶಂಕರ್ ಎಚ್ಚರಿಸಿದರು.
ಪಿಟಿಸಿಎಲ್ ಕಾಯ್ದೆಯಡಿ ನೀಡುವ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದನ್ನು, ಎಸ್‌ಸಿ–ಎಸ್‌ಟಿ ಮಕ್ಕಳ ಮೆರಿಟ್ ಹಣ ಕಡಿತಗೊಳಿಸಿರುವುದನ್ನು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ದಲಿತ ವಿದ್ಯಾರ್ಥಿಗಳು ಸಂಶೋಧನಾ ಮಾಡಲು ಇದ್ದ ಪ್ರಬುದ್ಧ ಯೋಜನೆ ರದ್ದುಗೊಳಿಸಿರುವುದನ್ನು, ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡದೇ ಇರುವುದನ್ನು ಪ್ರತಿಭಟನಕಾರರು ಖಂಡಿಸಿದರು.
ಸ್ಥಳಕ್ಕೆ ಬಂದ ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಹೋರಾಟಗಾರರಾದ ಎನ್. ವೆಂಕಟೇಶ್, ವಿ.ನಾಗರಾಜ್, ಮರಿಯಪ್ಪ ಹಳ್ಳಿ, ಹುಲ್ಕೆರೆ ಮಹದೇವ್, ರಮೇಶ್ ಡಾಕುಳಕಿ, ಗಂಗನಂಜಯ್ಯ, ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ಸಿ.ಜಿ. ಗಂಗಪ್ಪ, ಆನಂದ್, ಹಾರೋಹಳ್ಳಿ ರವಿ, ಬಾಲಕೃಷ್ಣ, ಯರಿಯೂರು ರಾಜಣ್ಣ, ಬಿ.ಡಿ. ಶಿವಬುದ್ದಿ, ನಂಜುಂಡಸ್ವಾಮಿ, ಶಂಭುಲಿಂಗ ಸ್ವಾಮಿ, ನಿಂಗರಾಜು, ಗದಗ್ ವೆಂಕಟೇಶಯ್ಯ, ಮರೆಪ್ಪ ಚಟೇರ್ಕರ್, ನಾಗರತ್ನ, ಜಯಂತಿ, ಜಯಮ್ಮ, ಕೃಷ್ಣಮೂರ್ತಿ ಸೇರಿ ನೂರಾರು ಮಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.