ADVERTISEMENT

ನಾಳೆ ದಸರಾ ಜಂಬೂಸವಾರಿ: ವಿಜಯದಶಮಿ ಮೆರವಣಿಗೆಗೆ ಲಕ್ಷಾಂತರ ಮಂದಿ ಭಾಗಿ ನಿರೀಕ್ಷೆ

ಎಂ.ಮಹೇಶ
Published 22 ಅಕ್ಟೋಬರ್ 2023, 23:45 IST
Last Updated 22 ಅಕ್ಟೋಬರ್ 2023, 23:45 IST
<div class="paragraphs"><p>ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ದಸರಾ ಅಂಗವಾಗಿ ಮಂಗಳವಾರ ವಿಜಯದಶಮಿ ಮೆರವಣಿಗೆ ನಡೆಯಲಿದ್ದು, ಆಸನಗಳು ಹಾಗೂ ಶಾಮಿಯಾನ ಹಾಕುವ ಕಾರ್ಯದಲ್ಲಿ ಕಾರ್ಮಿಕರು ಭಾನುವಾರ ತೊಡಗಿದ್ದರು</p></div>

ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ದಸರಾ ಅಂಗವಾಗಿ ಮಂಗಳವಾರ ವಿಜಯದಶಮಿ ಮೆರವಣಿಗೆ ನಡೆಯಲಿದ್ದು, ಆಸನಗಳು ಹಾಗೂ ಶಾಮಿಯಾನ ಹಾಕುವ ಕಾರ್ಯದಲ್ಲಿ ಕಾರ್ಮಿಕರು ಭಾನುವಾರ ತೊಡಗಿದ್ದರು

   

ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ.

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅ.24) ನಡೆಯಲಿದ್ದು, ಜಿಲ್ಲಾಡಳಿತದಿಂದ ಅಂತಿಮ ಹಂತದ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.

ADVERTISEMENT

ತೀವ್ರ ಬರ ಹಾಗೂ ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಯ ನಡುವೆಯೂ ಸಂಭ್ರಮ– ವೈಭವದಿಂದ ನಡೆಯುವ ದಸರಾ ಉತ್ಸವದ ಮುಖ್ಯ ಘಟ್ಟವಾದ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುತ್ತಾ ‘ರಾಜಪಥ’ದಲ್ಲಿ ಸಾಗಲು ಕಲಾತಂಡಗಳು, ಸ್ತಬ್ಧಚಿತ್ರಗಳು ಸಜ್ಜಾಗಿವೆ. ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ.

750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗುವ ಅಧಿದೇವತೆ ಚಾಮುಂಡೇಶ್ವರಿ ಮೂರ್ತಿಗೆ ನಮಿಸಲು, ಗಜಪಡೆಯನ್ನು ನೋಡಲು ಜನರು–ಪ್ರವಾಸಿಗರು ಕಾತರರಾಗಿದ್ದಾರೆ. ಅಂಬಾರಿ ಹೊರಲಿರುವ ‘ಅಭಿಮನ್ಯು’ ನೇತೃತ್ವದಲ್ಲಿ 14 ಆನೆಗಳು ಆಕರ್ಷಕ ವಿದ್ಯುತ್‌ ದೀಪಾಲಂಕಾರದ ನಡುವೆ ಸಾಗಲಿರುವುದು ವಿಶೇಷ.

ಸಂಜೆ ಚಾಲನೆ:

ಅರಮನೆಯ ಬಲರಾಮ ದ್ವಾರದಲ್ಲಿ ಮಂಗಳವಾರ ಮಧ್ಯಾಹ್ನ1.46ರಿಂದ 2.08ರೊಳಗೆ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ 4.40ರಿಂದ 5ರವರೆಗೆ ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಮೇಯರ್ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಜಂಬೂಸವಾರಿ ಉದ್ಘಾಟನೆಗೆ ಮುಖ್ಯಅತಿಥಿಯಾಗಿ ಆಹ್ವಾನಿಸುವುದನ್ನು ಈ ವರ್ಷವೂ ಮುಂದುವರಿಸಲಾಗಿದೆ. 

ಮೆರವಣಿಗೆಯು ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಲಿದೆ. 49 ಸ್ತಬ್ದಚಿತ್ರಗಳು, 50 ಜನಪದ ಕಲಾ ತಂಡಗಳು ಭಾಗವಹಿಸಲಿವೆ. ಹ್ಯಾಟ್ರಿಕ್ ಸಾಧನೆ ಮಾಡಿರುವ ‘ಅಭಿಮನ್ಯು’ ಆನೆಯೇ ಈ ಬಾರಿಯೂ ಅಂಬಾರಿ ಹೊತ್ತು ಸಾಗಲಿದೆ. ಗಜಪಡೆಗೆ ಹಲವು ದಿನಗಳಿಂದ ತಾಲೀಮು ನಡೆಸಲಾಗಿದೆ.

ನಂದಿ ಧ್ವಜ, ನೌಫತ್‌ ಮತ್ತು ನಿಶಾನೆ ಆನೆಗಳು, ಪೊಲೀಸ್ ವಾದ್ಯ ವೃಂದ, ಫಿರಂಗಿ ಗಾಡಿಗಳು, ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳು ಸಾಗುತ್ತವೆ. ಬಳಿಕ ನಾದಸ್ವರ, ಆನೆಗಾಡಿಯಲ್ಲಿ ಕರ್ನಾಟಕ ವಾದ್ಯವೃಂದ, ಮೈಸೂರು ಅರಮನೆ ವತಿಯಿಂದ ಅಡ್ಡಪಲ್ಲಕ್ಕಿ, ಪಂಚಕಳಸ, ಅರಮನೆಯ ಗೌರವ ನಿಶಾನೆಗಳು, ಪಟ್ಟದ ಆನೆ, ಪಟ್ಟದ ಕುದುರೆ, ಒಂಟೆಗಳು, ಕೆಎಸ್‌ಆರ್‌ಪಿ ಅಶ್ವಾರೋಹಿ ದಳದ ಇಂಗ್ಲಿಷ್ ಬ್ಯಾಂಡ್, ಪೊಲೀಸ್ ಅಶ್ವದಳ, ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಹಾಗೂ ಪೊಲೀಸ್ ಅಶ್ವದಳ ಸಾಗುತ್ತವೆ. ಚಿನ್ನದ ಅಂಬಾರಿ ಹೊರುವ ಗಜರಾಜನ ಅಕ್ಕಪಕ್ಕದಲ್ಲಿ ಎರಡು ಹೆಣ್ಣಾನೆಗಳು ‘ಕುಮ್ಕಿ’ ಆನೆಗಳಾಗಿ ಹೆಜ್ಜೆ ಹಾಕಲಿವೆ.

ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಸಿಬ್ಬಂದಿಯು ಇದೇ ಮೊದಲಿಗೆ ವಿಶೇಷ ಪೋಷಾಕು (ಸೆರೆಮೊನಿ ಡ್ರೆಸ್) ಧರಿಸಿ ಆಕರ್ಷಿಸಲಿದ್ದಾರೆ.

ಪಂಜಿನ ಕವಾಯತಿನೊಂದಿಗೆ ತೆರೆ: ಮಂಗಳವಾರ ಸಂಜೆ 7.30ಕ್ಕೆ ಬನ್ನಿಮಂಟಪ ಮೈದಾನದಲ್ಲಿ ನಡೆಯಲಿರುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಗೌರವವಂದನೆ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕೇಂದ್ರ ಹಾಗೂ ರಾಜ್ಯದ ಸಚಿವರು ಭಾಗವಹಿಸಲಿದ್ದಾರೆ. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಭಾನುವಾರ ನಡೆದ ಜಂಬೂಸವಾರಿ ಪೂರ್ವಾಭ್ಯಾಸವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಭಿಮನ್ಯು ಆನೆಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಡಿಸಿಪಿ ಮುತ್ತುರಾಜ್‌ ಇದ್ದಾರೆ/ ಪ್ರಜಾವಾಣಿ ಚಿತ್ರ

‘ವೈಮಾನಿಕ ಪ್ರದರ್ಶನ’ (ಏರ್‌ಶೋ) ಈ ಬಾರಿಯ ಉತ್ಸವದ ಮತ್ತೊಂದು ಆಕರ್ಷಣೆ ಸೋಮವಾರ (ಅ.23) ಮುಖ್ಯ ಪ್ರದರ್ಶನ ನಡೆಯಲಿದ್ದು, ಭಾರತೀಯ ವಾಯುಪಡೆಯ ‘ಸೂರ್ಯಕಿರಣ್‌ ಏರೋಬ್ಯಾಟಿಕ್‌ ತಂಡ’ದವರು ಪಾಲ್ಗೊಳ್ಳಲಿದ್ದಾರೆ.

ಜಂಬೂಸವಾರಿ ತಯಾರಿ ಅಂತಿಮ ಹಂತದಲ್ಲಿದ್ದು ಸಂಪ್ರದಾಯದಂತೆ ಎಲ್ಲವೂ ನಡೆಯಲಿದೆ. ಶಿಷ್ಟಾಚಾರ ಪಾಲನೆಗೂ ಒತ್ತು ಕೊಡಲಾಗಿದೆ
– ಡಾ.ಕೆ.ವಿ. ರಾಜೇಂದ್ರ ಜಿಲ್ಲಾಧಿಕಾರಿ
ಪಾಲ್ಗೊಳ್ಳಲಿರುವ ಆನೆಗಳು
ಅಭಿಮನ್ಯು,, ಅರ್ಜುನ, ಮಹೇಂದ್ರ, ಕಂಜನ್, ಲಕ್ಷ್ಮಿ, ರೋಹಿತ, ಹಿರಣ್ಯ, ಗೋಪಿ, ಪ್ರಶಾಂತ, ಸುಗ್ರೀವ, ವಿಜಯಾ, ವರಲಕ್ಷ್ಮಿ, ಭೀಮ ಮತ್ತು ಧನಂಜಯ ಆನೆಗಳು ಜಂಬೂಸವಾರಿಯಲ್ಲಿ ಭಾಗವಹಿಸಲಿವೆ.

ಅರಮನೆಯಲ್ಲಿ ‘ವಜ್ರಮುಷ್ಟಿ ಕಾಳಗ’

ಅಂಬಾವಿಲಾಸ ಅರಮನೆಯಲ್ಲಿ ವಿಜಯದಶಮಿ ಪ್ರಯುಕ್ತ ಜಟ್ಟಿಗಳ ರೋಚಕ ವಜ್ರಮುಷ್ಟಿ ಕಾಳಗ ನಡೆಯುತ್ತದೆ. ಅರಮನೆಯ ಸವಾರಿ ತೊಟ್ಟಿಯ ಮಣ್ಣಿನ ಅಖಾಡದಲ್ಲಿ ‘ವಿಜಯಯಾತ್ರೆ’ಗೂ ಮುನ್ನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಟ್ಟದ ಕತ್ತಿಗೆ ಪೂಜೆ‌ ಸಲ್ಲಿಸುತ್ತಿದ್ದಂತೆ ಜಟ್ಟಿಗಳ ಕಾಳಗ ಆರಂಭವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.