ADVERTISEMENT

ದತ್ತಪೀಠ ಹಿಂದೂಗಳಿಗೆ ನೀಡಲು ಆಗ್ರಹಿಸಿ ಹೋರಾಟ: ಜೂ. 5ರಿಂದ ಕೋಟಿ ಜಪಯಜ್ಞ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 7:28 IST
Last Updated 2 ಜುಲೈ 2020, 7:28 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌    

ಹುಬ್ಬಳ್ಳಿ: ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಲ್ಲಿರುವ ದತ್ತಪೀಠವನ್ನು ಹಿಂದೂಗಳಿಗೆ ನೀಡಿ ರಾಜ್ಯ ಸರ್ಕಾರ ವಿಶೇಷ ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಗುರುಪೂರ್ಣಿಮೆ ದಿನವಾದ ಜುಲೈ 5ರಿಂದ ‘ಶ್ರೀ ಗುರುದೇವದತ್ತ’ ಕೋಟಿ ಜಪಯಜ್ಞ ಮಾಡಲಾಗುವುದು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ದತ್ತಪೀಠದ ವಿವಾದ ಮುಂದಿಟ್ಟುಕೊಂಡು ಆ ಭಾಗದಲ್ಲಿ ಬಿಜೆಪಿ ಶಾಸಕರು ಹಾಗೂ ಸಚಿವರು ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ಈಗ ಅವರದ್ದೇ ಸರ್ಕಾರವಿದ್ದರೂ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ತಿಂಗಳಲ್ಲಿ ಕೋಟಿ ಜಪಯಜ್ಞ ಪೂರ್ಣಗೊಳ್ಳಲಿದ್ದು, ಅಷ್ಟರೊಳಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದರೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಒತ್ತಡ ಹೇರಲಾಗುವುದು. ಚಿಕ್ಕಮಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಹೋಮ ಮಾಡಲಾಗುವುದು’ ಎಂದು ತಿಳಿಸಿದರು.

ದತ್ತಪೀಠದಿಂದ 14 ಕಿ.ಮೀ. ದೂರದಲ್ಲಿರುವ ನಾಗೇನಹಳ್ಳಿ ಗ್ರಾಮದಲ್ಲಿ ಎರಡು ದರ್ಗಾಗಳು ಇದ್ದು, ಅದು ಬಾಬಾಬುಡನ್‌ ದರ್ಗಾ ಎನ್ನುವುದಕ್ಕೆ ದಾಖಲೆಗಳಿವೆ. ಮುಸ್ಲಿಂ ಸಮಾಜಕ್ಕೆ ಅದನ್ನು ಒಪ್ಪಿಸಿ ಅಭಿವೃದ್ಧಿ ಮಾಡಿಕೊಡಬೇಕು. ದತ್ತಪೀಠ ಮುಜುರಾಯಿ ಇಲಾಖೆಗೆ ಸೇರಿದ್ದು, ಹಿಂದೂ ಹಾಗೂ ಮುಸ್ಲಿಂಮರಲ್ಲಿ ಸೌಹಾರ್ದ ನಿರ್ಮಾಣವಾಗಲು ಈಗಿರುವ ದತ್ತಪೀಠವನ್ನು ಹಿಂದೂಗಳಿಗೆ, ನಾಗೇನಹಳ್ಳಿಯ ದರ್ಗಾವನ್ನು ಮುಸ್ಲಿಮರಿಗೆ ಕೊಡಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.