ಚಿಕ್ಕಮಗಳೂರು: ದತ್ತ ಜಯಂತ್ಯುತ್ಸವ ಅಂಗವಾಗಿ ಮಂಗಳವಾರ ಅನಸೂಯಾ ಜಯಂತಿ, ಸಂಕೀರ್ತನಾ ಯಾತ್ರೆ ಸಂಭ್ರಮದಿಂದ ಜರುಗಿದವು.
ಅನಸೂಯಾ ಜಯಂತಿ ನಿಮಿತ್ತ ಏರ್ಪಡಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಮಹಿಳೆಯರು, ದತ್ತ ಭಕ್ತರು ಪಾಲ್ಗೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಭಾಗವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಪ್ರಮುಖರು ನೇತೃತ್ವ ವಹಿಸಿದ್ದರು.
ಬೆಳಿಗ್ಗೆ 10.30ಕ್ಕೆ ಮೆರವಣಿಗೆ ಶುರುವಾಯಿತು. ನಗರದ ಬೋಳರಾಮೇಶ್ವರ ದೇಗುಲದ ಆವರಣದಿಂದ ಹೊರಟಿತು. ಭಕ್ತರು ಅನಸೂಯಾದೇವಿ, ಅತ್ರಿಮುನಿ, ಗುರುದತ್ತಾತ್ರೇಯ ಮೂರ್ತಿಗಳನ್ನು ಹೊತ್ತು ಉತ್ಸವದಲ್ಲಿ ಸಾಗಿದರು. ಭಜನೆ, ವೀರಗಾಸೆ ಮಹಿಳಾ ತಂಡದ ನೃತ್ಯ ಯಾತ್ರೆಗೆ ಮೆರುಗು ನೀಡಿದವು.
ಮೆರವಣಿಗೆಯು ಐ.ಜಿ. ರಸ್ತೆ, ರತ್ನಗಿರಿ ರಸ್ತೆ ಮೂಲಕ ಹಾದು ಕಾಮಧೇನು ಮಹಾಶಕ್ತಿ ಗಣಪತಿ ದೇಗುಲದ ಬಳಿ ಸಂಪನ್ನಗೊಂಡಿತು.
ಮೆರವಣಿಗೆ ನಂತರ ಮಹಿಳೆಯರು, ದತ್ತ ಭಕ್ತರು ವಾಹನಗಳಲ್ಲಿ ಇನಾಂ ದತ್ತ (ಐ.ಡಿ) ಪೀಠಕ್ಕೆ ತೆರಳಿದರು. ಗುರು
ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ ಮಾಡಿದರು. ದತ್ತಪೀಠದ ಬಳಿಯ ಸಭಾಂಗಣದಲ್ಲಿ ಪೂಜೆ, ಹೋಮ ನೆರವೇರಿದವು. ನಗರ, ಗಿರಿಶ್ರೇಣಿ ಮಾರ್ಗ, ಬಾಬಾಬುಡನ್ ಗಿರಿಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.