ADVERTISEMENT

ಲವ್‌ ಜಿಹಾದ್‌ ಸಹಿಸಲ್ಲ, ಅಂತರ್ಜಾತಿ ವಿವಾಹಕ್ಕೆ ವಿರೋಧವಿಲ್ಲ: ಹೊಸಬಾಳೆ

ಆರೆಸ್ಸೆಸ್‌ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 19:31 IST
Last Updated 20 ಮಾರ್ಚ್ 2021, 19:31 IST
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ   

ಬೆಂಗಳೂರು: ‘ಯುವತಿಯರಿಗೆ ಆಮಿಷ ಒಡ್ಡಿ ಮೋಸದಿಂದ ವಿವಾಹವಾದ ಬಳಿಕ ಮತಾಂತರ ಮಾಡುವುದನ್ನು (ಲವ್‌ ಜಿಹಾದ್‌) ಸಹಿಸಲು ಸಾಧ್ಯವೇ ಇಲ್ಲ. ಅದನ್ನು ವಿರೋಧಿಸುವ ಜತೆಗೆ, ಅದರ ತಡೆಗೆ ಸೂಕ್ತ ಕಾನೂನು ತರಬೇಕಿದೆ’ ಎಂದು ಆರೆಸ್ಸೆಸ್‌ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.

ಆರೆಸ್ಸೆಸ್‌ನಲ್ಲಿ ಹೊಸ ಜವಾಬ್ದಾರಿ ವಹಿಸಿಕೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಕರ್ನಾಟಕ ಮತ್ತು ಕೇರಳ ಹೈಕೋರ್ಟ್ ಗಳು ಕೂಡಾ ‘ಲವ್‌ ಜಿಹಾದ್‌’ ಬಗ್ಗೆ ಹೇಳಿವೆ. ಅದನ್ನು ತಡೆಯುವ ಕಾನೂನನ್ನು ಆರೆಸ್ಸೆಸ್‌ ಬೆಂಬಲಿಸಲಿದೆ’ ಎಂದು ಸ್ಪಷ್ಟಪಡಿಸಿದರು.

‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಗಪುರದಿಂದ (ಆರೆಸ್ಸೆಸ್‌ ಕೇಂದ್ರ ಕಚೇರಿ) ನಿಯಂತ್ರಿಸಲ್ಪಡುತ್ತಿದೆ’ ಎಂದು ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಆರೋ‍ಪಿಸುತ್ತಿದ್ದಾರಲ್ಲ’ ಎಂದು ಕೇಳಿದಾಗ, ‘ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವರು ಸ್ವತಂತ್ರರು. ಸರ್ಕಾರವನ್ನು ಒಂದು ಸ್ಥಳದಿಂದ ನಿಯಂತ್ರಿಸಲಾಗುತ್ತಿದೆ ಎನ್ನುವುದು ತಪ್ಪು. ರಾಜಕೀಯ ಉದ್ದೇಶದಿಂದ ಹೀಗೆ ಹೇಳುತ್ತಿದ್ದಾರೆ. ಆದರೆ, ಅಗತ್ಯಬಿದ್ದಾಗ ಇಡೀ ದೇಶ ಒಂದು ಕಾರಣಕ್ಕೆ ಒಟ್ಟಾಗುತ್ತದೆ’ ಎಂದರು.

ADVERTISEMENT

ಹುಡುಗಿಯರು ಹರಿದಿರುವ ಜೀನ್ಸ್ ಧರಿಸುವ ಬಗ್ಗೆ ಟೀಕಿಸಿ ಉತ್ತರಾಖಂಡ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಹೊಸಬಾಳೆ, ’ಆರೆಸ್ಸೆಸ್‌ನಿಂದಾಗಿ ದೇಶದಲ್ಲಿ ಎಲ್ಲವೂ ನಡೆಯುತ್ತದೆ ಎಂದಲ್ಲ. ಎಲ್ಲ ಆರೋಪಗಳಿಗೆ ಆರೆಸ್ಸೆಸ್‌ ಅನ್ನು ದೂರಲು ಯಾವುದೇ ಸಕಾರಣ ಇಲ್ಲ. ಆರೆಸ್ಸೆಸ್‌ ಏನೇ ಮಾಡಿದರೂ ಎಲ್ಲರ ಅಭಿಪ್ರಾಯ ಪಡೆದು ಬಹಿರಂಗವಾಗಿ ಮಾಡುತ್ತದೆ’ ಎಂದರು.

‘ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಇತ್ತೀಚೆಗೆ, ಬ್ರಾಹ್ಮಣ ಸಮುದಾಯದ ಯುವತಿಯರು ಬೇರೆ ಜಾತಿಗೆ ಸೇರಿದ ಯುವಕರನ್ನು ಮದುವೆ ಆಗಬಾರದು ಎಂದು ಹೇಳಿರುವ ಸಂದರ್ಭ ಮತ್ತು ಅದರ ಹಿನ್ನೆಲೆಯ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಅಂತರಜಾತಿ ವಿವಾಹವನ್ನು ಆರೆಸ್ಸೆಸ್‌ ಎಂದೂ ವಿರೋಧಿಸುವುದಿಲ್ಲ. ಜಾತಿ, ಸಮುದಾಯ ಇತ್ಯಾದಿ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಮಾಜದ ಶ್ರೇಯಕ್ಕೆ ಕೆಲಸ ಮಾಡುತ್ತದೆ’ ಎಂದರು.

‘ಮೀಸಲಾತಿ ಮುಂದುವರಿಸಬೇಕೇ ಎಂಬ ಬಗ್ಗೆ ಆರೆಸ್ಸೆಸ್‌ ಈಗಾಗಲೇ ನಿಲುವು ಸ್ಪಷ್ಟಪಡಿಸಿದೆ. ಸಮಾಜದಲ್ಲಿ ಅಗತ್ಯವಿರುವವರೆಗೂ ಮೀಸಲಾತಿ ಅಸ್ತಿತ್ವದಲ್ಲಿರಬೇಕು. ಆರೆಸ್ಸೆಸ್‌ ಕೂಡ ಈ ಬಗ್ಗೆ ನಿರ್ಣಯ ಅಂಗೀಕರಿಸಿದೆ. ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಅಗತ್ಯವೆಂದು ಸಂವಿಧಾನ ಹೇಳುತ್ತದೆ. ಅದಕ್ಕೆ ಆರೆಸ್ಸೆಸ್‌ ಕೂಡಾ ಬದ್ಧ’ ಎಂದು ಸ್ಪಷ್ಟಪಡಿಸಿದರು. ‘ಆರೆಸ್ಸೆಸ್‌ ಧಾರ್ಮಿಕ ಸಂಘಟನೆ ಯಲ್ಲ. ರಾಷ್ಟ್ರೀಯವಾದಿ ಸಂಘಟನೆ. ಹೀಗಾಗಿ, ಯುವಕರು ಹೆಚ್ಚಾಗಿ ಆರೆಸ್ಸೆಸ್ ಮತ್ತು ಅದರ ಸಾಮಾಜಿಕ ಕಾರ್ಯಗಳಿಗೆ ಆಕರ್ಷಿತ ರಾಗಿ ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದಾರೆ’ ಎಂದರು.

ಮುಂದಿನ ಯೋಜನೆ: ‘2025 ರಲ್ಲಿ ಆರೆಸ್ಸೆಸ್‌ಗೆ ನೂರನೇ ವರ್ಷ ತುಂಬು ತ್ತಿರುವ ಸಮಯದಲ್ಲಿ ಭಾರತದಾದ್ಯಂತ ಸಂಘ ಕಾರ್ಯವನ್ನು ಪ್ರತಿ ಮಂಡಲದ ತನಕ ತಲುಪಿಸಲು ನಿರ್ಣಯಿಸಲಾಗಿದೆ. ಪರಿವಾರ ಪ್ರಬೋಧನ, ಗೋಸೇವಾ, ಪರಿಸರ ಸಂರಕ್ಷಣೆ, ಜಲಸಂರಕ್ಷಣೆ, ಸಮಾಜ ಸಾಮರಸ್ಯ, ಗ್ರಾಮ ವಿಕಾಸ ಇತ್ಯಾದಿ ಸಮಾಜ ಹಿತ ಕಾರ್ಯಗಳಲ್ಲಿ ಸಂಘ ತೊಡಗಿಸಿಕೊಳ್ಳಲಿದೆ. ಭಾರತೀಯ ವಿಚಾರಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ವೈಚಾರಿಕವಾಗಿ ಮಂಡಿಸಲಾ ಗುವುದು. ಭಾರತದ ಕಲ್ಪನೆ ಏನು ಎಂದು ವಿಶ್ವದ ಮುಂದೆ ಮಂಡಿಸಲು ಅಭಿಯಾನವನ್ನು ಮುಂದಿನ ಮೂರು ವರ್ಷ ಹಮ್ಮಿಕೊಳ್ಳಲಾಗುವುದು’ ಎಂದರು.

‘ಸಭೆಯಲ್ಲಿ ರಾಮ ಮಂದಿರ ನಿರ್ಮಾಣ; ಭಾರತದ ಶಕ್ತಿ ಪ್ರದರ್ಶನ ಮತ್ತು ಕೋವಿಡ್ ವಿರುದ್ಧ ಏಕತೆ ಪ್ರದರ್ಶನ ಎಂಬ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಕ್ಕೆ ಆರೆಸ್ಸೆಸ್‌ ಭಾಗಿಯಾಗಿದೆ. ಇದಕ್ಕೆ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆ’ ಎಂದೂ ಹೇಳಿದರು.

ಹೊಸಬಾಳೆ ನೂತನ ಸರಕಾರ್ಯವಾಹ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ನೂತನ ಸರಕಾರ್ಯವಾಹರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಚುನಾಯಿತರಾಗಿದ್ದಾರೆ. ಆರೆಸ್ಸೆಸ್‌ನಲ್ಲಿ ಸರಕಾರ್ಯವಾಹ ಎರಡನೇ ಅತಿ ದೊಡ್ಡ ಹುದ್ದೆ.

ಇಲ್ಲಿನ ಚನ್ನೇನಹಳ್ಳಿಯಲ್ಲಿ ನಡೆದ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ (ಎಪಿಬಿಎಸ್‌) ಆಂತರಿಕ ಚುನಾವಣೆಯಲ್ಲಿ ಹೊಸಬಾಳೆ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. 12 ವರ್ಷಗಳಿಂದ ಈ ಹುದ್ದೆಯಲ್ಲಿದ್ದ ಸುರೇಶ್‌ (ಭಯ್ಯಾಜಿ) ಜೋಶಿ ಅವರ ಸ್ಥಾನವನ್ನು ಅವರು ತುಂಬಲಿದ್ದಾರೆ. ಈವರೆಗೆ ಹೊಸಬಾಳೆ ಸಹ ಸರಕಾರ್ಯವಾಹ ಆಗಿದ್ದರು. ಸುರೇಶ್‌ (ಭಯ್ಯಾಜಿ) ಜೋಶಿ 2009ರಲ್ಲಿ ಸರಕಾರ್ಯವಾಹ ಆಗಿ ನೇಮಕಗೊಂಡಿದ್ದರು. ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ತಲಾ ಮೂರು ವರ್ಷಗಳ ನಾಲ್ಕು ಅವಧಿಗಳಲ್ಲಿ ಸರಕಾರ್ಯವಾಹ ಆಗಿ ಅವರು ಆಯ್ಕೆ ಆಗಿದ್ದರು.

2018ರಲ್ಲಿ ಸತತ ನಾಲ್ಕನೇ ಅವಧಿಗೆ ಆಯ್ಕೆಯಾಗಿದ್ದ ಭಯ್ಯಾಜಿ ಅವರ ಅವಧಿ ಮುಕ್ತಾಯವಾಗಿದೆ.

ಸರಕಾರ್ಯವಾಹ ಹುದ್ದೆಯಲ್ಲಿರುವವರು ಮಾರ್ಗದರ್ಶಕರಾಗಿ ಆರೆಸ್ಸೆಸ್‌ನ ದೈನಂದಿನ ಚಟುವಟಿಕೆಯನ್ನು ನಿರ್ವಹಿಸುತ್ತಾರೆ. ಈ ಹಿಂದೆ ಕರ್ನಾಟಕದ ಹೊ.ವೆ. ಶೇಷಾದ್ರಿ ಅವರು ಸರಕಾರ್ಯವಾಹ ಹುದ್ದೆಯಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ್ದರು.

ಸಂಘದ ಎರಡನೇ ಉನ್ನತ ಹುದ್ದೆಗೇರಿದ ಕನ್ನಡಿಗ

ಬೆಂಗಳೂರು: ಆರೆಸ್ಸೆಸ್‌ನ ನೂತನ ಸರಕಾರ್ಯವಾಹ ಆಗಿ ನೇಮಕಗೊಂಡಿರುವ ದತ್ತಾತ್ರೇಯ ಹೊಸಬಾಳೆ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದವರು. ದತ್ತಾಜಿ ಎಂದೇ ಆರೆಸ್ಸೆಸ್‌ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

1954ರ ಡಿ. ‌1ರಂದು ಜನಿಸಿದ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸಾಗರದಲ್ಲಿ ಪಡೆದಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದರು. ಅಲ್ಲಿ ಎಚ್. ನರಸಿಂಹಯ್ಯ ಅವರ ಒಡನಾಟ ಮತ್ತು ಮಾರ್ಗದರ್ಶನ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

1968ರಲ್ಲಿ ಅವರು ಆರೆಸ್ಸೆಸ್ ಪ್ರವೇಶಿಸಿದ್ದರು. 1972ರಲ್ಲಿ ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್‌ ಸದಸ್ಯರಾಗಿ, ಬಳಿಕ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ 15 ವರ್ಷ ಕೆಲಸ ಮಾಡಿದ್ದಾರೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ‘ಮೀಸಾ’ (ಆಂತರಿಕ ಭದ್ರತೆ ಕಾಯ್ದೆಯ ನಿರ್ವಹಣೆ) ಅಡಿ ಬಂಧನಕ್ಕೆ ಒಳಗಾಗಿ 17 ತಿಂಗಳು ಸೆರೆವಾಸ ಅನುಭವಿಸಿದ್ದಾರೆ. ನಂತರದ ದಿನಗಳಲ್ಲಿ ಹೊ.ವೆ. ಶೇಷಾದ್ರಿ ಅವರ ಜತೆಯಲ್ಲಿ ತುರ್ತು ಪರಿಸ್ಥಿತಿ ಕುರಿತ ‘ಭುಗಿಲು’ ಪುಸ್ತಕದ ಸಂಪಾದನಾ ಕೆಲಸ ನಿರ್ವಹಿಸಿದ್ದಾರೆ. ಸಂಘಟನೆ, ಸಾಮಾಜಿಕ ಸಾಮರಸ್ಯ, ಸಾಹಿತ್ಯ,ಕಲೆ ಹೊಸಬಾಳೆಯವರ ಆಸಕ್ತಿಯ ಕ್ಷೇತ್ರಗಳು. ಉತ್ತಮ ವಾಗ್ಮಿ, ಸಂಘಟನಾಕಾರರು ಆಗಿರುವ ಅವರು ಹಲವು ಲೇಖನಗಳನ್ನು ಬರೆದಿದ್ದಾರೆ. ಅವರು ಕನ್ನಡದ ಮಾಸ ಪತ್ರಿಕೆ ‘ಅಸೀಮಾ’ದ ಸಂಸ್ಥಾಪಕರು. 2004ರಲ್ಲಿ ಮಾತೃ ಸಂಘಟನೆ ಆರೆಸ್ಸೆಸ್‌ಗೆ ಮರಳಿದ ಅವರು, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಹೊಣೆ ಹೊತ್ತರು. ಬಳಿಕ ಸಹ ಸರಕಾರ್ಯವಾಹರಾಗಿ ನೇಮಕ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.