ಬೆಂಗಳೂರು: ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅಥವಾ ಅವರ ಕುಟುಂಬದ ಸದಸ್ಯರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲು ಅವರದೇ ಪಕ್ಷದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ಷೇಪ ಎತ್ತಿದ್ದಾರೆ.
ವಿರೋಧ ಲೆಕ್ಕಿಸದೇ ಒಂದು ವೇಳೆ ಟಿಕೆಟ್ ನೀಡಿದರೆ ಬಂಡಾಯ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್ ನೀಡಲು ಕ್ಷೇತ್ರದ ಕಾರ್ಯಕರ್ತರು, ಮುಖಂಡರ ವಿರೋಧವಿದೆ. ಅವರಿಗೆ ಟಿಕೆಟ್ ನೀಡಿದರೆ ಬಂಡಾಯ ಎದುರಿಸಬೇಕಾಗುತ್ತದೆ. ಜಿಲ್ಲೆಯ ಜನರ ಅಪೇಕ್ಷೆಯಂತೆ ನನಗೆ ಇಲ್ಲವೇ, ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ ಅವರ ಪುತ್ರ ಡಾ.ರವಿಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
‘ಸಿದ್ದೇಶ್ವರ ಅವರ ತಂದೆ ಮಲ್ಲಿಕಾರ್ಜುನಪ್ಪ ಸಜ್ಜನ ರಾಜಕಾರಣಿ, ಅಜಾತಶತ್ರು. ಎರಡು ಬಾರಿ ಸಂಸದರಾಗಿದ್ದರು. ನಾಲ್ಕು ಬಾರಿ ಆಯ್ಕೆಯಾಗಿರುವ ಈಗಿನ ಸಂಸದರಿಗೆ ಅಹಂಕಾರ ನೆತ್ತಿಗೇರಿದೆ. ಕಾಂಗ್ರೆಸ್‌ನ ಶಾಮನೂರು ಕುಟುಂಬದ ಮುಂದೆ ಸ್ಪರ್ಧಿಸುವ ಗಂಡಸರು ಬಿಜೆಪಿಯಲ್ಲಿ ಯಾರಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಪಕ್ಷವನ್ನೇ ಗೌಣ ಮಾಡಿದ್ದಾರೆ’ ಎಂದು ದೂರಿದರು.
‘ನನಗೆ ಟಿಕೆಟ್ ನೀಡದಿದ್ದರೆ, ನನ್ನ ಪತ್ನಿ, ಸಹೋದರ, ಪುತ್ರಿನಿಗೆ ಟಿಕೆಟ್ ನೀಡಲು ಪಟ್ಟು ಹಿಡಿದಿದ್ದಾರೆ. ಅವರ ಕುಟುಂಬದ ಸದಸ್ಯರು ಒಮ್ಮೆಯೂ ಪಕ್ಷದ ಬಾವುಟ ಹಿಡಿದಿಲ್ಲ. ಘೋಷಣೆ ಕೂಗಿಲ್ಲ. ಅಂಥವರಿಗೆ ಟಿಕೆಟ್ ನೀಡಲು ಹೇಗೆ ಸಾಧ್ಯ? ವೈದ್ಯರ ಮಕ್ಕಳು ವೈದ್ಯರಾಗಲು ಅವರ ಅಪ್ಪನ ಅರ್ಹತೆ ಸಾಕೇ? ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯಬೇಕಲ್ಲವೇ? ಎಂದು ಪ್ರಶ್ನಿಸಿದರು.
‘ನನಗೆ ಟಿಕೆಟ್ ನೀಡಬೇಕು ಎನ್ನುವುದು ಇಡೀ ಜಿಲ್ಲೆಯ ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಾಯ. ನನಗೆ ಜಾತಿ ಇಲ್ಲದೆ ಇರಬಹುದು, ಅವರಿಗಿಂತ ಹೆಚ್ಚಿನ ನೀತಿ ಇದೆ. ಜನರ ಪ್ರೀತಿ ಇದೆ. ಜಾತ್ಯತೀತವಾಗಿ ಜನರು ಬೆಂಬಲಿಸುತ್ತಾರೆ’ ಎಂದರು.
‘ಹಿಂದೆ ಜಿಲ್ಲೆಯ 7 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೆ ಎನ್ನುವ ಸಿದ್ದೇಶ್ವರ ಅವರನ್ನೇ 2023ರ ವಿಧಾನಸಭಾ ಚುನಾವಣೆಯ ಸೋಲಿಗೂ ಹೊಣೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ದೇಶದ ಪ್ರಧಾನಿಯಾಗಬೇಕು ಎನ್ನುವುದು ಎಲ್ಲರ ಇಚ್ಛೆ. ಮೋದಿ ಅವರ ಅಪೇಕ್ಷೆಯಂತೆ ಜಿಲ್ಲೆಯ ಕುಟುಂಬ ರಾಜಕಾರಣಕ್ಕೂ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.