ದಾವಣಗೆರೆ: ‘ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯುಕ್ತರು ₹ 15 ಲಕ್ಷ ನೀಡಿದ್ದಾರೆ’ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಹೇಳಿದ್ದಾರೆ.
‘ಗುತ್ತಿಗೆದಾರ ಕೃಷ್ಣ ಅವರು ಬಹಿರಂಗಗೊಳಿಸಿರುವ ಆಡಿಯೊದಲ್ಲಿವ ಧ್ವನಿ ಪಾಲಿಕೆಯ ವ್ಯವಸ್ಥಾಪಕ ವೆಂಕಟೇಶ್ ಅವರದ್ದೇ ಎಂದು ಹೇಗೆ ಹೇಳುವುದು, ಮಾತುಕತೆ ವೇಳೆ ಆ ಧ್ವನಿ ಕೂಡ ಸಚಿವರ ಹೆಸರು ಹೇಳಿಲ್ಲ. ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ವ್ಯಕ್ತಿಯೇ ಸಚಿವರ ಹೆಸರನ್ನು ಹೇಳುತ್ತಾರೆ. ಈ ರೀತಿ ತೇಜೋವಧೆ ಮಾಡುವುದು ಸರಿಯಲ್ಲ’ ಎಂದು ಅವರು ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ನಾಯಕರ ತುಳಿಯುವ ಯತ್ನ: ‘ಜಕಾತಿ ವಸೂಲಿ ಮಾಡುವ ಟೆಂಡರ್ ಪಡೆಯಲು ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಅವರಿಗೆ ಹಣದ ಆಮಿಷವೊಡ್ಡಿ ಖೆಡ್ಡಾಕ್ಕೆ ಕೆಡವಲಾಗಿದೆ. ಇದಕ್ಕೆ ಸಂಬಂಧವೇ ಇಲ್ಲದ ಸಚಿವ ಬೈರತಿ ಬಸವರಾಜ ಅವರ ಹೆಸರನ್ನು ಎಳೆದು ತರಲಾಗಿದೆ. ಇದು ಹಿಂದುಳಿದ ವರ್ಗಗಳ ನಾಯಕರನ್ನು ತುಳಿಯಲು ಕಾಂಗ್ರೆಸ್ ಮಾಡಿದ ಪಿತೂರಿ. ಹಿಂದೆ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಳ್ಳುವಂತೆ ಮಾಡಿದ ತಂತ್ರವನ್ನೇ ಇಲ್ಲಿ ಬಳಸಲಾಗಿದೆ’ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಎಂ. ಸತೀಶ್ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.