ADVERTISEMENT

ಸಚಿವರಿಗೆ ₹15 ಲಕ್ಷ ಸಂದಾಯ: ವ್ಯವಸ್ಥಾಪಕ– ಗುತ್ತಿಗೆದಾರನ ಆಡಿಯೊ ಸಂಭಾಷಣೆ ಬಹಿರಂಗ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 20:02 IST
Last Updated 7 ನವೆಂಬರ್ 2022, 20:02 IST
ಕೃಷ್ಣ ಹಾಗೂ ಬೈರತಿ ಬಸವರಾಜ
ಕೃಷ್ಣ ಹಾಗೂ ಬೈರತಿ ಬಸವರಾಜ   

ದಾವಣಗೆರೆ: ಬೀದಿಬದಿ ವ್ಯಾಪಾರಿಗಳಿಂದ ಜಕಾತಿ (ಸುಂಕ) ಸಂಗ್ರಹಕ್ಕೆ ಅನುಮತಿ ನೀಡಲು ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಭಾನುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ವೆಂಕಟೇಶ್‌ ಅವರು ‘ಜಿಲ್ಲಾ ಉಸ್ತುವಾರಿ ಸಚಿವರಿಗೂ (ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ) ₹ 15 ಲಕ್ಷ ಸಂದಾಯ ಮಾಡಲಾಗಿದೆ’ ಎಂದು ಹೇಳಿರುವ ಆಡಿಯೊ ಸೋಮವಾರ ಹೊರಬಿದ್ದಿದೆ.

‘2021ರಲ್ಲಿ ಜಕಾತಿ ಸಂಗ್ರಹದ ಗುತ್ತಿಗೆ ಪಡೆದಿದ್ದೆ. ನಷ್ಟದ ಕಾರಣ ಗುತ್ತಿಗೆ ಅವಧಿ ವಿಸ್ತರಿಸುವಂತೆ ಪಾಲಿಕೆ ಆಯುಕ್ತರನ್ನು ಕೇಳಿಕೊಂಡಿದ್ದೆ. ಅದಕ್ಕೆ ಆಯುಕ್ತರು, ವ್ಯವಸ್ಥಾಪಕ ವೆಂಕಟೇಶ್‌ ಅವರನ್ನು ಸಂಪರ್ಕಿಸಲು ಸೂಚಿಸಿದ್ದರು. ಗುತ್ತಿಗೆ ನವೀಕರಿಸಲು ವೆಂಕಟೇಶ್‌ ₹ 7 ಲಕ್ಷದ ಲಂಚಕ್ಕೆ ಬೇಡಿಕೆ ಇರಿಸಿ, ಮುಂಗಡವಾಗಿ ₹ 2 ಲಕ್ಷ ಪಡೆದಿದ್ದರು. ಭಾನುವಾರ ರಾತ್ರಿ ಮತ್ತೆ ₹ 3 ಲಕ್ಷ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ’ ಎಂದು ಗುತ್ತಿಗೆದಾರ ಕೃಷ್ಣ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜಿಲ್ಲಾ ಉಸ್ತುವಾರಿ ಸಚಿವರಿಗೆ ₹ 15 ಲಕ್ಷ ನೀಡಲಾಗಿದೆ’ ಎಂದು ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್‌ ಹೇಳಿರುವ ಆಡಿಯೊವನ್ನು ಇದೇ ವೇಳೆ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಣಿ ಸರ್ಕಾರ್‌ ಅವರೊಂದಿಗೆ ಬಹಿರಂಗಪಡಿಸಿದ ಅವರು, ‘ಪಾಲಿಕೆಯು ಭ್ರಷ್ಟಾಚಾರದ ಉಗ್ರಾಣವಾಗಿದೆ’ ಎಂದು ದೂರಿದರು.

ADVERTISEMENT

‘ಕಮಿಷನರ್‌ ಬಾಯಿಬಿಟ್ಟು ಕೇಳಿದ್ದಾರೆ. ಕೃಷ್ಣ ಅವರಿಗೆ ಹೇಳಿ ₹ 5 ಲಕ್ಷ ಕೊಡಿಸಿ ಅಂದಿದ್ದಾರೆ. ಯಾರಿಗೆ ಕೊಡ್ತಾರೆ, ನಮಗೆ ಕೊಟ್ರೆ ಲಾಸ್‌ ಆಗುತ್ತೇನ್ರೀ, ಕೆಲಸ ಮಾಡಿ ಕೊಡುವುದಿಲ್ಲವೇ ಎಂಬುದಾಗಿ ತಿಳಿಸಿದ್ದಾರೆ’ ಎಂದು ವೆಂಕಟೇಶ್‌ ಹಾಗೂ ಕೃಷ್ಣ ನಡುವೆ ನಡೆದಿರುವ ಮಾತುಕತೆಯ ವಿವರ ಆಡಿಯೊದಲ್ಲಿದೆ.

‘ಕಮಿಷನನರ್‌ ಟೆನ್ಶನ್‌ನಲ್ಲಿದ್ದಾರೆ. ಮೊನ್ನೆ ಸಚಿವರು ಬಂದಾಗ ₹ 15 ಲಕ್ಷ ಕೊಟ್ಟಿದ್ದಾರೆ’ ಎಂದು ವೆಂಕಟೇಶ್‌ ಹೇಳಿರುವ ಹಾಗೂ ‘ಸಚಿವರೆಂದರೆ, ಬೈರತಿ ಬಸವರಾಜ ಅವರಿಗಾ? ಪ್ರತಿ ಬಾರಿ ಬಂದಾಗಲೂ ಅವರಿಗೆ ದುಡ್ಡು ಕೊಡಬೇಕಾ’ ಎಂದು ಗುತ್ತಿಗೆದಾರ ಪ್ರಶ್ನಿಸುವುದೂ ಆಡಿಯೊದಲ್ಲಿ ದಾಖಲಾಗಿದೆ.

ಆಯುಕ್ತರ ಮೇಲೆ ಕ್ರಮಕ್ಕೆ ಆಗ್ರಹ: ‘ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಕೂಡ ಈ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಯುಕ್ತರು ಆಂಜನೇಯ ಬಡಾವಣೆಯಲ್ಲಿ ₹ 3 ಕೋಟಿ ವೆಚ್ಚದ ಮನೆ ಕಟ್ಟಿಸುತ್ತಿದ್ದಾರೆ. ಹಲವು ನಿವೇಶನಗಳನ್ನು ಹೊಂದಿದ್ದಾರೆ. ದಾಖಲೆ ಸರಿ ಇರುವ ಯಾವುದೇ ಕೆಲಸಗಳೂ ಪಾಲಿಕೆಯಲ್ಲಿ ಆಗುತ್ತಿಲ್ಲ. ದಾಖಲೆ ಸರಿ ಇಲ್ಲದ, ಅಕ್ರಮ ಕೆಲಸಗಳಷ್ಟೇ ಆಗುತ್ತಿವೆ’ ಎಂದು ಮಣಿ ಸರ್ಕಾರ್‌ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.