ಬೆಂಗಳೂರು: ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಹಾಗೂ ಇತರರಿಂದ ಜಪ್ತಿ ಮಾಡಿದ್ದ ಚಿನ್ನಾಭರಣವನ್ನು ತಮಿಳುನಾಡಿನ ಸರ್ಕಾರಕ್ಕೆ ಹಸ್ತಾಂತರಿಸಲು ನಗರದ 36ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ದಿನಾಂಕ ನಿಗದಿ ಮಾಡಿದೆ.
ಟಿ. ನರಸಿಂಹಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ‘ಮಾರ್ಚ್ 6 ಹಾಗೂ 7ರಂದು ಚಿನ್ನಾಭರಣ ಹಸ್ತಾಂತರ ಮಾಡಲಾಗುವುದು. ಚಿನ್ನಾಭರಣ ಪಡೆಯಲು ಅಧಿಕೃತ ವ್ಯಕ್ತಿಯೊಬ್ಬರನ್ನು ತಮಿಳುನಾಡು ಸರ್ಕಾರ ನೇಮಿಸಬೇಕು’ ಎಂದು ಆದೇಶಿಸಿದ್ದಾರೆ.
‘ತಮಿಳುನಾಡಿನ ಡಿವೈಎಸ್ಪಿಯವರು ತಮ್ಮ ರಾಜ್ಯದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವಿಷಯ ತಿಳಿಸಬೇಕು. ತಮಿಳುನಾಡು ಐಜಿಪಿ ಅವರೊಂದಿಗೆ ನಿಗದಿತ ದಿನದಂದು ನ್ಯಾಯಾಲಯದಲ್ಲಿ ಹಾಜರಿರಬೇಕು. ಛಾಯಾಗ್ರಾಹಕರು ಹಾಗೂ ವಿಡಿಯೊಗ್ರಾಫರ್‌ಗಳನ್ನು ಕರೆತರಬೇಕು. ಜೊತೆಗೆ, ಚಿನ್ನಾಭರಣ ತುಂಬಿಕೊಳ್ಳಲು ಆರು ದೊಡ್ಡ ಗಾತ್ರದ ಟ್ರಂಕ್‌ಗಳನ್ನು ತರಬೇಕು’ ಎಂದು ಆದೇಶದಲ್ಲಿ ಹೇಳಿದ್ದಾರೆ.
‘ಚಿನ್ನಾಭರಣ ಹಸ್ತಾಂತರ ಸಂದರ್ಭದಲ್ಲಿ ಸ್ಥಳೀಯ ಪೊಲೀಸರಿಂದ ಭದ್ರತೆಗೆ ವ್ಯವಸ್ಥೆ ಮಾಡಲು ರಿಜಿಸ್ಟ್ರಾರ್ ಕ್ರಮ ಕೈಗೊಳ್ಳಬೇಕು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
7,040 ಗ್ರಾಂ ತೂಕದ 468 ಬಗೆಯ ಚಿನ್ನಾಭರಣ ಹಾಗೂ ವಜ್ರದ ಆಭರಣಗಳು, 700 ಕೆ.ಜಿ ಬೆಳ್ಳಿ ಸಾಮಗ್ರಿ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಪ್ರಕರಣದ ವಿಚಾರಣೆಗಾಗಿ ಕರ್ನಾಟಕ ಸರ್ಕಾರ ವೆಚ್ಚ ಮಾಡಿದ್ದ ಹಣವನ್ನು ಪಾವತಿ ಮಾಡಿರುವ ತಮಿಳುನಾಡು ಸರ್ಕಾರ, ಈ ಬಗ್ಗೆ ನ್ಯಾಯಾಲಯಕ್ಕೆ ದಾಖಲೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.