ADVERTISEMENT

ರೈತರಲ್ಲಿ ಅರಿವು ಮೂಡಿಸಬೇಕು

ಕೃಷಿ ಕಾಯ್ದೆ: ಡಿಸಿಎಂ ಅಶ್ವತ್ಥನಾರಾಯಣ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 20:29 IST
Last Updated 7 ಫೆಬ್ರುವರಿ 2021, 20:29 IST
ಡಾ.ಸಿ.ಎನ್. ಅಶ್ವತ್ಥನಾರಾಯಣ
ಡಾ.ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ‘ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು ರೈತರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿವೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ರೈತರ ದಾರಿ ತಪ್ಪಿಸುತ್ತಿವೆ. ನಾವೆಲ್ಲರೂ ಸೇರಿ ಈ ಕಾಯ್ದೆಗಳ ಕುರಿತು ರೈತರಲ್ಲಿ ಅರಿವು ಮೂಡಿಸೋಣ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಬಿಜೆಪಿಯ ಸಾಮಾಜಿಕ ಜಾಲತಾಣ ಪ್ರಕೋಷ್ಠವು ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ‘ನೂತನ ಕಾಯ್ದೆ
ಗಳ ಜಾರಿಯಿಂದ ರೈತರು ಈಗಾಗಲೇ ಪಡೆಯುತ್ತಿರುವ ಸೌಲಭ್ಯಗಳು ರದ್ದಾಗುವುದಿಲ್ಲ. ಇವುಗಳಿಂದ ರೈತರ ಸ್ವಾತಂತ್ರ್ಯ ಹರಣವಾಗುವುದಿಲ್ಲ. ಅವರನ್ನು ವ್ಯಾಪಾರಿಗಳ ಕಪಿಮುಷ್ಠಿಗೆ ದೂಡುವ ದುರುದ್ದೇಶವೂ ಅಡಗಿಲ್ಲ. ಕೆಲ ಪಕ್ಷ ಹಾಗೂ ವ್ಯಕ್ತಿಗಳು ಈ ಕಾಯ್ದೆಗಳ ಕುರಿತು ಅಪಪ್ರಚಾರ ನಡೆಸುತ್ತಿವೆ. ತಾವು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು ಎಂಬುದು ರೈತರ ಬಹುಕಾಲದ ಬೇಡಿಕೆ. ಹೊಸ ಕಾಯ್ದೆಗಳ ಮೂಲಕ ಸರ್ಕಾರವು ಅವರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಿದೆ’ ಎಂದು ಪ್ರತಿಪಾದಿಸಿದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಸಂಸದ ಪಿ.ಸಿ.ಮೋಹನ್‌ ‘ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಮುಖೇನ ಜನರಿಗೆ ತಲುಪಿಸುವುದು ಅಸಾಧ್ಯ. ಸಾಮಾಜಿಕ ಜಾಲತಾಣಗಳ ಬಳಕೆ ಗೊತ್ತಿದ್ದರೆ ಈ ಹಾದಿ ಸರಳವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರ ಜೊತೆ ಮಾತನಾಡುವಾಗಲೆಲ್ಲಾ ಈ ಮಾತನ್ನು ಒತ್ತಿ ಹೇಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕನಿಷ್ಠ 2 ಲಕ್ಷ ಹಿಂಬಾಲಕರಿಲ್ಲದವರಿಗೆ ಲೋಕಸಭಾ ಟಿಕೆಟ್‌ ನೀಡುವುದಿಲ್ಲ ಎಂದು ಹಿಂದೊಮ್ಮೆ ಅಮಿತ್‌ ಶಾ ನುಡಿದಿದ್ದರು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.