ಬೆಂಗಳೂರು: ‘ಮಹಾರಾಷ್ಟ್ರ ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಬಕಾರಿ ಇಲಾಖೆಯಲ್ಲಿ ₹ 700 ಕೋಟಿ ವಸೂಲಿ ಮಾಡಿದೆ ಎಂಬ ತಮ್ಮ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ಸಾಬೀತುಪಡಿಸಲಿ. ನಾವು ಯಾವುದೇ ಶಿಕ್ಷೆಗೆ ಬೇಕಾದರೂ ಗುರಿಯಾಗುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಚುನಾವಣೆಗಳಲ್ಲಿ ಸುಳ್ಳೇ ಬಿಜೆಪಿಯ ಪ್ರಬಲ ಅಸ್ತ್ರವಾಗಿದೆ. ಹೀಗಾಗಿ ಪ್ರಧಾನ ಮಂತ್ರಿಯಂಥ ಉನ್ನತ ಹುದ್ದೆಯಲ್ಲಿರುವವರು ಆಧಾರರಹಿತ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದರು.
‘ಕೇಂದ್ರ ಸಚಿವರುಗಳು ಯಾವ ಯಾವ ಚುನಾವಣೆಗೆ ಎಷ್ಟೆಷ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ’ ಎಂದೂ ಹೇಳಿದರು.
‘ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಾರಾಷ್ಟ್ರ ಕಾಂಗ್ರೆಸ್‌ನವರು ನಮ್ಮ ಜತೆ ಚರ್ಚೆಯನ್ನೇ ಮಾಡಿಲ್ಲ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ನಾಯಕರು ಈ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಈ ಸುಳ್ಳು ಆರೋಪ ಮಾಡುತ್ತಿರುವ ನಾಯಕರು ರಾಜ್ಯಕ್ಕೆ ಪರಿಶೀಲನೆ ನಡೆಸುವಂತೆ ಆಹ್ವಾನ ನೀಡುತ್ತಿದ್ದು, ಅವರಿಗಾಗಿ 30 ವಿಶೇಷ ಬಸ್ ಹಾಗೂ ವಿಮಾನ ಪ್ರಯಾಣ ವ್ಯವಸ್ಥೆ ಮಾಡಲಾಗುವುದು. ರಾಜ್ಯದ 30 ಜಿಲ್ಲೆಗಳಿಗೂ ಭೇಟಿ ನೀಡಿ, ನಮ್ಮ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ದೂರವಾಣಿ ಸಂಖ್ಯೆಗಳನ್ನು ಒದಗಿಸಿ ಪತ್ರ ಬರೆಯುತ್ತಿದ್ದೇನೆ’ ಎಂದರು.
‘ಪದೇ ಪದೇ ಕರ್ನಾಟಕದ ವಿಚಾರಗಳನ್ನು ಮೋದಿ ಪ್ರಸ್ತಾಪ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇದರಿಂದ ಏನೂ ಆಗುವುದಿಲ್ಲ. ಜನ ಈಗಾಗಲೇ ಅವರಿಗೆ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ದೇಶದಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವುದನ್ನು ನೋಡಿ ಬಿಜೆಪಿ ನಾಯಕರಿಗೆ ಭಯ ಆರಂಭವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.