ಬೆಂಗಳೂರು: ‘ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ’ ಎಂಬ ಕಾಂಗ್ರೆಸ್‌ನವರ ಪಾದಯಾತ್ರೆ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಒಂದು ಚುನಾವಣಾ ಗಿಮಿಕ್. ಇಂಥ ಗಿಮಿಕ್‌ಗಳಿಗೆ ಜನ ಮೋಸ ಹೋಗುವುದಿಲ್ಲ. ತಂತ್ರಗಾರಿಕೆಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಬಿಜೆಪಿ ಯಾವಾಗಲೂ ‘ಕೃಷ್ಣೆಯ ನಡಿಗೆ ಸತ್ಯದ ಕಡೆಗೆ’ ಎಂಬುದನ್ನು ಪರಿಪಾಲಿಸುತ್ತಾ ಬಂದಿದೆ. ಉಪಚುನಾವಣೆ ಇರಲಿಲ್ಲ ಎಂದಿದ್ದರೆ, ಕಾಂಗ್ರೆಸ್‌ನವರ ‘ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ’ ಇರುತ್ತಿರಲಿಲ್ಲ. ಅದು ನಿರ್ಲಕ್ಷ್ಯದ ಕಡೆಗೆ ಇರುತ್ತಿತ್ತು’ ಎಂದು ವ್ಯಂಗ್ಯವಾಡಿದರು.
‘ಮಾಜಿ ನೀರಾವರಿ ಸಚಿವರೂ ಆಗಿರುವ ಶಾಸಕ ಎಂ.ಬಿ. ಪಾಟೀಲ ಅವರು, ‘ಕೃಷ್ಣೆ ಕಾಂಗ್ರೆಸ್‌ನವರ ಪಾಪದ ಕೂಸು’ ಎಂದು ನಾನು ಹೇಳಿದ್ದೇನೆಂದು ಸುಳ್ಳು ಹೇಳಿದ್ದಾರೆ. ನಾನು ಯಾವತ್ತೂ ಆ ರೀತಿ ಹೇಳಿಲ್ಲ ಮತ್ತು ಹೇಳುವವನೂ ಅಲ್ಲ. ನಾನು ಈ ರೀತಿ ಹೇಳಿದ್ದೇನೆಂದು ಎಂ.ಬಿ. ಪಾಟೀಲರು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
‘ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ನವರು ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಯಾವುದೇ ರೀತಿಯ ಸಮರ್ಪಕ ಹಣಕಾಸು ಒದಗಿಸಲಿಲ್ಲ. ಆದ್ದರಿಂದ ಈ ಯೋಜನೆಗಳು ಕುಂಟುತ್ತಾ ತೆವಳುತ್ತಾ ಸಾಗಿದೆ. 2008ರಿಂದ 2013ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜಲ ಸಂಪನ್ಮೂಲ ಸಚಿವರಾಗಿದ್ದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿಂದಗಿ ಮತಕ್ಷೇತ್ರಕ್ಕೆ ಅನುಕೂಲವಾಗುವ ಇಂಡಿ ಶಾಖಾ ಕಾಲುವೆ ಮತ್ತು ಗುತ್ತಿ ಬಸವಣ್ಣ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿದರು. ಈ ಎರಡೂ ಯೋಜನೆಗಳಿಗೆ ₹ 1,000 ಕೋಟಿ ಖರ್ಚಾಗಿದ್ದು 80 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಸಚಿವರು ವಿವರಿಸಿದರು.
‘ಬಿಜೆಪಿ ಮಾಡಿದ ಅಭಿವೃದ್ಧಿಯ ಬಗ್ಗೆ ಸಿಂದಗಿ ಕ್ಷೇತ್ರದ ಜನತೆಗೆ ಸೂಕ್ತವಾದ ಕಲ್ಪನೆ ಇದೆ. ಕಾಂಗ್ರೆಸ್‌ನವರ ಪಾದಯಾತ್ರೆಯಂಥ ಹೊಸ ನಾಟಕದಿಂದ ಮೋಸ ಹೋಗುವುದಿಲ್ಲ. ಈ ಕ್ಷೇತ್ರದಿಂದ ಬಿಜೆಪಿ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
’ಪ್ರತಿ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಗಿಮಿಕ್‌ಗಳನ್ನು ಮಾಡುತ್ತಾರೆ. ಈಗ ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ಮತ್ತು ಡಿಸೆಂಬರ್ ಹೊತ್ತಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಚುನಾವಣೆ ಬರುವುದರಿಂದ ಈ ಹೊಸ ನಾಟಕ ಆರಂಭಿಸಿದ್ದಾರೆ’ ಎಂದೂ ಕಾರಜೋಳ ಆರೋಪಿಸಿದರು.
‘ಗಾಂಧೀಜಿಯವರ ಹೆಸರನ್ನು ಯಾಕೆ ದುರುಪಯೋಗ ಮಾಡಿಕೊಳ್ಳುತ್ತಾರೆಂಬುದು ಗೊತ್ತಿಲ್ಲ. ಕಾಂಗ್ರೆಸ್‌ನವರಿಗೆ ಗಾಂಧೀಜಿಯವರ ಹೆಸರನ್ನು ಹೇಳುವಂಥ ನೈತಿಕತೆಯೇ ಇಲ್ಲ’ ಎಂದೂ ಟೀಕಿಸಿದರು.
‘ಕಾಂಗ್ರೆಸ್‌ನವರದ್ದು ಜನರಿಗೆ ಮೋಸವಾಡಿರುವಂಥ ಇತಿಹಾಸ. ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಮತ್ತು ಭೂಸ್ವಾಧೀನ ಕಾಮಗಾರಿಗಳಿಗೆ ಹಣ ನೀಡದೇ 20 ಹಳ್ಳಿಗಳನ್ನು ಸ್ಥಳಾಂತರ ಮಾಡದೇ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲಿಲ್ಲ. ಇದರಿಂದಾಗಿ ನಮ್ಮ ಕೃಷ್ಣೆ ಕಣ್ಣೀರು ಸುರಿಸುವಂತಾಯಿತು’ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.