ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಡಿಸಿಎಂ ಶ್ರಮ: ಮರಿತಿಬ್ಬೇಗೌಡ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:48 IST
Last Updated 25 ಜನವರಿ 2021, 19:48 IST
ಮರಿತಿಬ್ಬೇಗೌಡ
ಮರಿತಿಬ್ಬೇಗೌಡ   

ಮೈಸೂರು: ಸ್ವಾತಂತ್ರ್ಯದ ಬಳಿಕ ಮೂರನೇ ಬಾರಿ ಬದಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಸಚಿವ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಶ್ರಮಿಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಶ್ಲಾಘಿಸಿದರು.

ಮೈಸೂರಿನ ಬೋಗಾದಿಯಲ್ಲಿ ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಸಂದರ್ಭವೇ ಅಶ್ವತ್ಥನಾರಾಯಣ ಅವರು ಉನ್ನತ ಶಿಕ್ಷಣ ಸಚಿವರಾಗಿರುವುದು ಸುದೈವ. ನೂತನ ಶಿಕ್ಷಣ ನೀತಿಯ ಕರಡು ರಾಜ್ಯಕ್ಕೆ ಬಂದಾಗಿನಿಂದ ಅವರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದರು.

ಅಶ್ವತ್ಥನಾರಾಯಣ ಅವರು ಸ್ವತಃ ವೈದ್ಯರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಕ್ಕಳು ಅವರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಶಿಕ್ಷಣದ ಮಹತ್ವ ಹಾಗೂ ಅದರಿಂದ ಉಂಟಾಗುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಅವರಿಗೆ ಅತ್ಯುತ್ತಮ ಜ್ಞಾನವಿದೆ ಎಂದ ಅವರು, ‘ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತೀರಿ. ಹಿಂದೊಮ್ಮೆ ನಾನು ಸದನದಲ್ಲೂ ಇದೇ ಮಾತು ಹೇಳಿದ್ದೆ' ಎಂದು ನುಡಿದರು.

ADVERTISEMENT

ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿ: ಆರ್ಥಿಕವಾಗಿ ಮತ್ತು ಸಾಮಾಜಿಕ ವಾಗಿ ಹಿಂದುಳಿದಿರುವ ಮಕ್ಕಳು ಮಾತ್ರ ಐಟಿಐಗಳಲ್ಲಿ ವ್ಯಾಸಂಗ ಮಾಡಲು ಬರುತ್ತಾರೆ. ಶ್ರೀಮಂತರ ಮಕ್ಕಳು ಇಲ್ಲಿಗೆ ಬರುವುದಿಲ್ಲ. ಹೀಗಾಗಿ ವಿದ್ಯಾಬ್ಯಾಸ ಮುಗಿದ ತಕ್ಷಣ ಆ ವಿದ್ಯಾರ್ಥಿ
ಗಳಿಗೆ ಉದ್ಯೋಗ ಸಿಗುವಂತೆ ಆಗಬೇಕು ಎಂದರು.

ಸರಕಾರಿ, ಅನುದಾನಿತ ಹಾಗೂ ಖಾಸಗಿ ಐಟಿಐಗಳಲ್ಲಿ ಹಲವಾರು ಸಮಸ್ಯೆ ಗಳಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ವ್ಯಾಪ್ತಿಯೊಳಗೆ ಈ ಶಿಕ್ಷಣ ಸಂಸ್ಥೆಗಳನ್ನು ತಂದು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.