ಬೆಂಗಳೂರು: ಉತ್ತರಾಖಂಡ ರಾಜ್ಯದ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿ, ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿ ಮೃತಪಟ್ಟ ಒಂಬತ್ತು ಮಂದಿಯ ಮೃತದೇಹಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ತಂದು ಕುಟುಂಬಸ್ಥರಿಗೆ ಶುಕ್ರವಾರ ಹಸ್ತಾಂತರ ಮಾಡಲಾಯಿತು.
ಮೃತದೇಹಗಳನ್ನು ಹಸ್ತಾಂತರ ಮಾಡುತ್ತಿದ್ದಂತೆ ಸಂಬಂಧಿಕರು ಕಣ್ಣೀರು ಹಾಕಿದರು. ಸ್ಥಳದಲ್ಲಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿದರು.
ಪದ್ಮಿನಿ ಹೆಗಡೆ, ವೆಂಕಟೇಶ್ ಪ್ರಸಾದ್, ಆಶಾ ಸುಧಾಕರ್, ಪದ್ಮನಾಭ ಕುಂದಾಪುರ ಕೃಷ್ಣಮೂರ್ತಿ, ಸಿಂಧು ವಕೆಲಂ, ವಿನಾಯಕ್ ಮುಂಗುರವಾಡಿ, ಸುಜಾತಾ ಮುಂಗುರವಾಡಿ, ಚಿತ್ರಾ ಪ್ರಣೀತ್, ಅನಿತಾ ರಂಗಪ್ಪ ಅವರು ದುರಂತದಲ್ಲಿ ಮೃತಪಟ್ಟಿದ್ದರು. ಮೃತದೇಹ ಪಡೆದ ಸಂಬಂಧಿಕರು ವಿವಿಧ ರುದ್ರಭೂಮಿಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು ಎಂದು ಮೂಲಗಳು ತಿಳಿಸಿವೆ.
ಮೃತದೇಹಗಳನ್ನು ಉತ್ತರಕಾಶಿಯಿಂದ ನೇರವಾಗಿ ಬೆಂಗಳೂರಿಗೆ ತರಲು ಸಾಧ್ಯವಾಗಿರಲಿಲ್ಲ. ಆಂಬುಲೆನ್ಸ್‌ಗಳಲ್ಲಿ ರಸ್ತೆಮಾರ್ಗದ ಮೂಲಕ ಮೃತದೇಹಗಳನ್ನು ದೆಹಲಿಗೆ ಕೊಂಡೊಯ್ದು ಅಲ್ಲಿಂದ ಮೂರು ಪ್ರತ್ಯೇಕ ವಿಮಾನಗಳಲ್ಲಿ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತರಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.