ADVERTISEMENT

ಮ್ಯಾನ್‌ಹೋಲ್‌ನಲ್ಲಿ ಮೂವರ ಸಾವು: ಗುತ್ತಿಗೆದಾರನ ಬಂಧನ

ಸುರಕ್ಷತಾ ನಿಯಮ ಅನುಸರಿಸದೇ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 23:38 IST
Last Updated 4 ಜೂನ್ 2021, 23:38 IST
ಘಟನೆ ಸ್ಥಳಕ್ಕೆ ರಾಮನಗರ ಎಸ್ಪಿ ಗಿರೀಶ್‌ ಭೇಟಿ ನೀಡಿ ಪರಿಶೀಲಿಸಿದರು
ಘಟನೆ ಸ್ಥಳಕ್ಕೆ ರಾಮನಗರ ಎಸ್ಪಿ ಗಿರೀಶ್‌ ಭೇಟಿ ನೀಡಿ ಪರಿಶೀಲಿಸಿದರು   

ರಾಮನಗರ: ನಗರದ ಐಜೂರಿನ ಮಲ್ಲೇಶ್ವರ ಬಡಾವಣೆಯಲ್ಲಿರುವ ನೇತಾಜಿ ಪಾಪ್ಯುಲರ್ ಶಾಲೆ ಎದುರು ಶುಕ್ರವಾರ ಬೆಳಿಗ್ಗೆ ನಿರ್ಮಾಣ ಹಂತದಲ್ಲಿದ್ದ ಒಳಚರಂಡಿ ಮ್ಯಾನ್‌ಹೋಲ್‌ಗೆ ಇಳಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಬೆಂಗಳೂರಿನ ಕಮಲಾನಗರದ ನಿವಾಸಿಗಳಾದ ರಾಜೇಶ್ (40), ಮಂಜುನಾಥ್ (29), ಮಂಜುನಾಥ್ (32) ಮೃತಪಟ್ಟವರು.

ನಗರದ 30ನೇ ವಾರ್ಡ್‌ನಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ‌ ಮುಕ್ತಾಯ ಹಂತದಲ್ಲಿದೆ. ಬೆಳಿಗ್ಗೆ 11ರ ಸುಮಾರಿಗೆ ಹೊಸ ಚರಂಡಿಗೆ ಹಾಕಲಾಗಿದ್ದ ಮರಳಿನ ಚೀಲ ಹಾಗೂ ಇಟ್ಟಿಗೆಯ ಬ್ಲಾಕ್‌ ತೆಗೆಯಲು ಈ ಕಾರ್ಮಿಕರು ಮ್ಯಾನ್‌ಹೋಲ್ ಮೂಲಕ 20 ಅಡಿ ಆಳಕ್ಕೆ ಇಳಿದಿದ್ದರು.

ADVERTISEMENT

ಮೊದಲಿಗೆ ರಾಜೇಶ ಕೆಳಗೆ‌ ಇಳಿದಿದ್ದು, ಆಯತಪ್ಪಿ ಬಿದ್ದಿದ್ದಾರೆ.ಈ ಸಂದರ್ಭ ತಲೆಗೆ ಪೆಟ್ಟಾಗಿದೆ. ಅವರನ್ನು ರಕ್ಷಿಸಲು ಉಳಿದ ಇಬ್ಬರು ಕೆಳಗೆ ಇಳಿದಿದ್ದು, ಉಸಿರುಗಟ್ಟಿ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಬದುಕುಳಿಯಲಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿ ಆಮ್ಲಜನಕ‌ ಮಾಸ್ಕ್ ತೊಟ್ಟು ಕೆಳಗೆ ಇಳಿದು ಶವಗಳನ್ನು ಹೊರತೆಗೆದರು.

ಗುತ್ತಿಗೆದಾರರ ನಿರ್ಲಕ್ಷ್ಯ

ರಾಮನಗರದ ಹರೀಶ್‌ ಎಂಬುವರು ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಬೆಂಗಳೂರಿನಿಂದ ಕಾರ್ಮಿಕರನ್ನು ಕರೆತಂದಿದ್ದರು. ಮ್ಯಾನ್‌ಹೋಲ್‌ಗೆ ಏಕಾಏಕಿ ಕಾರ್ಮಿಕರನ್ನು ಇಳಿಸಿದ್ದು, ಒಳಗೆ ಆಮ್ಲಜನಕ ಇದೆಯೋ ಇಲ್ಲವೋ ಎಂದು ಕೂಡ ಪರೀಕ್ಷಿಸಿಕೊಂಡಿರಲಿಲ್ಲ. ಕೆಲಸ ಮಾಡುವವರಿಗೆ ಸುರಕ್ಷಾ ಸಾಧನಗಳನ್ನೂ ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಗುತ್ತಿಗೆದಾರ ಹರೀಶ್‌ ಹಾಗೂ ಅವರ ಸಹಾಯಕ ಮನೋಜ್‌ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. 'ಪ್ರಕರಣದಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಯಾವುದೇ ಸುರಕ್ಷತಾ ನಿಯಮ ಅನುಸರಿಸದೇ ಕಾಮಗಾರಿ ನಡೆಸಿದ್ದು, ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ್ದಾರೆ. ಅವರ ವಿರುದ್ಧ ಮ್ಯಾನುಯೆಲ್ ಸ್ಕ್ಯಾವೆಂಜರ್ ಕಾಯ್ದೆಯೂ ಸೇರಿದಂತೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ' ಎಂದು ರಾಮನಗರ ಎಸ್ಪಿ ಗಿರೀಶ್ ತಿಳಿಸಿದರು.

‘ಗಮನಕ್ಕೆ ತಂದಿಲ್ಲ’: ‘ಕಾಮಗಾರಿ ಕುರಿತು ಮುಂಚಿತವಾಗಿ ನಗರಸಭೆಗೆ ಮಾಹಿತಿ ನೀಡಬೇಕಿತ್ತು. ನಮ್ಮ ಎಂಜಿನಿಯರ್‌ ಸಮ್ಮುಖದಲ್ಲಿ ಕೆಲಸ ಮಾಡಬೇಕಿತ್ತು. ಆದರೆ ನಮ್ಮ ಗಮನಕ್ಕೆ ತರದೆಯೇ ಗುತ್ತಿಗೆದಾರರು ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿದ್ದಾರೆ’ ಎಂದು ರಾಮನಗರ ನಗರಸಭೆ ಆಯುಕ್ತ ನಂದಕುಮಾರ್ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.