ADVERTISEMENT

ರಾತ್ರಿ ಕರ್ಫ್ಯೂ: ಮುಂದಿನವಾರ ನಿರ್ಧಾರ– ಸಿ.ಎಂ ಬೊಮ್ಮಾಯಿ

ಕ್ರಿಸ್‌ಮಸ್‌, ಹೊಸವರ್ಷಾಚರಣೆ: ಮುಂದಿನವಾರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 19:39 IST
Last Updated 9 ಡಿಸೆಂಬರ್ 2021, 19:39 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಓಮೈಕ್ರಾನ್‌ ಪ್ರಕರಣಗಳು ಪತ್ತೆಯಾಗಿರುವುದು ಮತ್ತು ಕೋವಿಡ್‌ ಪ್ರಕರಣಗಳನ್ನು ನಿಯಂತ್ರಿಸಲು ರಾತ್ರಿ ಕರ್ಫ್ಯೂ ವಿಧಿಸಬೇಕೇ ಎಂಬ ಬಗ್ಗೆ ಮುಂದಿನ ಒಂದು ವಾರದ ಪರಿಸ್ಥಿತಿ ಅವಲೋಕಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಗುರುವಾರ ಈ ವಿಷಯ ತಿಳಿಸಿದ ಅವರು, ಕ್ರಿಸ್‌ಮಸ್ ಮತ್ತು ಹೊಸ ವರ್ಷ ಆಚರಣೆಯ ವಿಚಾರವಾಗಿ ಮುಂದಿನ ವಾರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

‘ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್‌ ಅವರು ಸಂಪುಟ ಸಭೆಯ ಮುಂದೆ ಈ ವಿಚಾರವಾಗಿ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಅವರು ನೀಡಿದ ವಿವರಗಳು ಹಾಗೂ ಕೋವಿಡ್‌ ದೃಢಪಡುತ್ತಿರುವ ಸಂಖ್ಯೆ ನೋಡಿದಾಗ ಯಾರೂ ಗಾಬರಿಯಾಗುವ ಪರಿಸ್ಥಿತಿ ಸದ್ಯಕ್ಕಂತೂ ಇಲ್ಲ’ ಎಂದೂ ಬೊಮ್ಮಾಯಿ ಹೇಳಿದರು.

ADVERTISEMENT

ಹಾಸ್ಟೆಲ್‌ಗಳಲ್ಲಿ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಸುದರ್ಶನ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಹಾಸ್ಟೆಲ್‌ಗಳಲ್ಲಿ ದಿನಕ್ಕೆ ಎರಡು ಬಾರಿ ಸ್ಯಾನಿಟೈಸ್‌ ಮಾಡುವುದು, ಹಾಸ್ಟೆಲ್‌ಗಳಿಗೆ ಭೇಟಿ ನೀಡುವವರ ಸಂಖ್ಯೆಯನ್ನು ಕಡಿಮೆ ಮಾಡುವುದು, ಅಡುಗೆ ಮತ್ತಿತರ ಕೆಲಸ ಮಾಡುವವರಿಗೆ ಎರಡು ಡೋಸ್‌ ಲಸಿಕೆ ನೀಡುವುದು, ಸೋಂಕಿತರನ್ನು ಪ್ರತ್ಯೇಕಗೊಳಿಸಲು ಐಸೋಲೇಶನ್‌ ಕೊಠಡಿ ಸಿದ್ಧಪಡಿಸಲು ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.

ಎರಡು–ಮೂರು ತಿಂಗಳ ಹಿಂದೆ ಕೋವಿಡ್‌ ಲಸಿಕೆಯ ವಿಶೇಷ ಅಭಿಯಾನ ನಡೆಸಿದಂತೆ ಮತ್ತೊಮ್ಮೆ ವಿಶೇಷ ಅಭಿಯಾನ ನಡೆಸಬೇಕು. ಈವರೆಗೆ ಲಸಿಕೆ ಪಡೆಯದವರಿಗೆ ಇದ
ರಿಂದ ಅನುಕೂಲವಾಗುತ್ತದೆ ಎಂದು ಸಚಿವ ಸಹೋದ್ಯೋಗಿಗಳು ಸಲಹೆ ನೀಡಿದ್ದು, ಅದಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ಕೇರಳದಿಂದ ಬರುವ ವಿದ್ಯಾರ್ಥಿಗಳು ಮತ್ತು ಇತರರು ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು ಬರುವುದು ಕಡ್ಡಾಯ. ಉಳಿದಂತೆ ಈಗ ಇರುವ ಮಾರ್ಗಸೂಚಿಯನ್ನೇ ಮುಂದುವರಿಸಲಾಗುವುದು. ಕ್ಲಸ್ಟರ್‌ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುವುದು. ಮೂರು ಜನರಿಗೆ ಕೋವಿಡ್‌ ದೃಢಪಟ್ಟರೆ ಕ್ಲಸ್ಟರ್ ಎಂದು ಪರಿಗಣಿಸಲಾಗುವುದು. ಹೊಸದಾಗಿ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಸುಧಾಕರ್‌ ಗೈರು:ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಸಚಿವ ಸಂಪುಟ ಸಭೆಯಲ್ಲಿ ಹಾಜರಿರಲಿಲ್ಲ. ಈ ಬಗ್ಗೆ ಬೊಮ್ಮಾಯಿ ಅವರನ್ನು ಪ್ರಶ್ನಿಸಿದಾಗ, ಅನುಮತಿ ಪಡೆದು ಗೈರಾಗಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.