ಬೆಂಗಳೂರು: ಅರಣ್ಯ ದಾಖಲೆಗಳಲ್ಲಿ ನಮೂದಾಗಿರುವ 43 ಸಾವಿರ ಹೆಕ್ಟೇರ್‌ಗೂ ಹೆಚ್ಚು ಸರ್ಕಾರಿ ಭೂಮಿ ನಾಪತ್ತೆಯಾಗಿದೆ. ಅಂದರೆ, ದಾಖಲೆಗಳಲ್ಲಿ ಉಲ್ಲೇಖವಾಗಿರುವ ನಿಗದಿತ ಸರ್ವೆ ನಂಬರ್‌ಗಳಲ್ಲಿ ಈ ಭೂಪ್ರದೇಶವೇ ಇಲ್ಲ.
ಪರಿಭಾವಿತ ಅರಣ್ಯದ (ಡೀಮ್ಡ್) ವ್ಯಾಪ್ತಿಯ ಗೊಂದಲ ಕುರಿತು ಮರುಪರಿಶೀಲಿಸಲು ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿತ್ತು. ಸುಮಾರು 43 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯು ದಾಖಲೆಗಳಲ್ಲಿ ಮಾತ್ರ ಇದೆ. ವಾಸ್ತವದಲ್ಲಿ ಈ ಭೂಮಿಯೇ ಅಲ್ಲಿ ಇಲ್ಲ ಎಂದು ಈ ಸಮಿತಿಗಳು ವರದಿ ಕೊಟ್ಟಿವೆ.
ಪರಿಭಾವಿತ ಅರಣ್ಯ ಪ್ರದೇಶಗಳನ್ನು ಗುರುತಿಸಲು 2018ರಲ್ಲಿ ನೇಮಿಸಲಾಗಿದ್ದ ತಜ್ಞರ ಸಮಿತಿ ರಾಜ್ಯದಲ್ಲಿ 9,94,881 ಹೆಕ್ಟೇರ್ ವಿಸ್ತೀರ್ಣದ ಪರಿಭಾವಿತ ಅರಣ್ಯ ಪ್ರದೇಶಗಳಿವೆ ಎಂದು ವರದಿ ನೀಡಿತ್ತು. ಅದನ್ನೇ ರಾಜ್ಯ ಸರ್ಕಾರ ಯಥಾವತ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ವರದಿಯಲ್ಲಿನ ಲೋಪಗಳ ಕುರಿತು ದೂರುಗಳು ಬಂದಿದ್ದರಿಂದಾಗಿ ಪರಿಶೀಲನೆಗಾಗಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಸಮಿತಿ ರಚಿಸಲಾಗಿತ್ತು.
ಪುನರ್ ಪರಿಶೀಲನೆಗೆ ರಚಿಸಲಾಗಿದ್ದ ಜಿಲ್ಲಾ ಸಮಿತಿಗಳು ಪರಿಭಾವಿತ ಅರಣ್ಯದ ವ್ಯಾಪ್ತಿಯನ್ನು 3.30 ಲಕ್ಷ ಹೆಕ್ಟೇರ್ ಎಂದು ಗುರುತಿಸಿವೆ. 6.64 ಲಕ್ಷ ಹೆಕ್ಟೇರ್ ಪ್ರದೇಶವನ್ನು ವ್ಯಾಪ್ತಿಯಿಂದ ಕೈಬಿಟ್ಟಿವೆ. ಆದರೂ, ಗೊಂದಲಗಳು ಮಾತ್ರ ಮುಗಿದಿಲ್ಲ.
ಯಾವುದು ಪರಿಭಾವಿತ ಅರಣ್ಯ ಎನ್ನುವುದಕ್ಕೆ ಸರ್ಕಾರದ ಬಳಿ ನಿರ್ದಿಷ್ಟ ವ್ಯಾಖ್ಯಾನವೇ ಇಲ್ಲ. ಪೂರ್ವನಿರ್ಧರಿತ ಮಾನದಂಡಗಳನ್ನೂ ಅಳವಡಿಸಿಲ್ಲ ಎನ್ನುವುದನ್ನು ಅರಣ್ಯ ಇಲಾಖೆಯೇ ಒಪ್ಪಿಕೊಂಡಿದೆ. ಪ್ರತಿ ಹೆಕ್ಟೇರ್‌ಗೆ ಕನಿಷ್ಠ 50 ಮರಗಳಿರುವ ಪ್ರದೇಶವನ್ನು ಪರಿಭಾವಿತ ಎಂದು ನಮೂದಿಸಿದ ಪರಿಣಾಮವಾಗಿ ರೈತರ ಹೊಲ, ತೋಟ, ಪಟ್ಟ ಭೂಮಿ, ಮನೆಗಳು, ಆಸ್ಪತ್ರೆ ಪ್ರದೇಶಗಳನ್ನೂ ವ್ಯಾಪ್ತಿಗೆ ಸೇರಿಸಲಾಗಿತ್ತು. ಅಷ್ಟೇ ಅಲ್ಲದೆ, ಶಾಸನಬದ್ಧ ಅರಣ್ಯ ಪ್ರದೇಶ, ಮೀಸಲು ಅರಣ್ಯ ಪ್ರದೇಶಗಳನ್ನೂ ತಪ್ಪಾಗಿ ವರ್ಗೀಕರಿಸಿ, ‘ಪರಿಭಾವಿತ’ದ ಪರಿಧಿಗೆ ತಂದಿರುವುದನ್ನು ಜಿಲ್ಲಾ ಸಮಿತಿಗಳು ಪತ್ತೆ ಮಾಡಿವೆ.
ಅರಣ್ಯದ ಗುಣಲಕ್ಷಣಗಳನ್ನು ಹೊಂದಿಲ್ಲದ ಭೂಮಿ, ಖಾಸಗಿ ಪಟ್ಟಾ, ನೆಡು ತೋಪುಗಳು, ಬಗರ್‌ಹುಕುಂ ಸಾಗುವಳಿ ಮಂಜೂರಾದ ಜಮೀನು, ಮೀಸಲು ಅರಣ್ಯ, ಎರಡು ಹೆಕ್ಟೇರ್‌ಗಿಂತ ಕಡಿಮೆ ಇರುವ ಪ್ರದೇಶಗಳನ್ನು ಹೊರಗಿಟ್ಟು ಪರಿಭಾವಿತ ಅರಣ್ಯದ ವ್ಯಾಪ್ತಿಯನ್ನು ಪನರ್ ಪರಿಶೀಲಿಸಿ, ಈ ಸಮಿತಿಗಳು ವರದಿ ಸಿದ್ಧಪಡಿಸಿವೆ.
ಪರಿಭಾವಿತ ಅರಣ್ಯ ಪ್ರದೇಶ ಮರುಪರಿಶೀಲಿಸಲು ರಚಿಸಲಾಗಿದ್ದ ಜಿಲ್ಲಾ ಸಮಿತಿಗಳು ನೀಡಿದ ವರದಿಗೂ ಆಕ್ಷೇಪಣೆಗಳು ವ್ಯಕ್ತವಾಗಿದ್ದು, ಮತ್ತೊಂದು ಸಮಿತಿ ರಚಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಅರಣ್ಯ ಹಕ್ಕು ಕಾಯ್ದೆ, ಬಗರ್‌ಹುಕುಂ ಅಡಿಯಲ್ಲಿ ಸಾಗುವಳಿ ಮಾಡಿದ ಭೂಮಿಯನ್ನೂ ಪರಿಭಾವಿತ ಅರಣ್ಯದ ವ್ಯಾಪ್ತಿಗೆ ಸೇರಿಸಲಾಗಿದೆ. ಮಂಜೂರಾತಿ ಕೋರಿ ಸಲ್ಲಿಕೆಯಾದ ಅರ್ಜಿಗಳು ಇತ್ಯರ್ಥವಾಗದೆ ಅಂತಹ ಭೂಮಿ ಕುರಿತು ನಿರ್ಧಾರ ತೆಗೆದುಕೊಳ್ಳಬಾರದು ಎಂದು ಶಾಸಕರು, ಸಚಿವರು ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
‘ಮತ್ತೊಂದು ಸಮಿತಿ ರಚನೆಗೆ ನಿರ್ಧರಿಸಲಾಗಿದೆ. ಪ್ರಕ್ರಿಯೆಗಳು ಆರಂಭವಾಗಿದ್ದು, ಶೀಘ್ರ ಆದೇಶ ಹೊರಡಿಸಲಾಗುವುದು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅರಣ್ಯ ಇಲಾಖೆ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪರಿಭಾವಿತ ಅರಣ್ಯ ಪ್ರದೇಶ ಈಗ 3.30 ಲಕ್ಷ ಹೆಕ್ಟೇರ್‌ಗೆ ಕುಸಿದಿದೆ. ಈಗಿರುವ ಪ್ರದೇಶ <br/>ಸಂಕ್ಷಣೆಗೆ ಸರ್ಕಾರ ಮುಂದಾಗಬೇಕುಅನಂತ ಹೆಗಡೆ ಅಶೀಸರ, ಮಾಜಿ ಅಧ್ಯಕ್ಷ ಕರ್ನಾಟಕ ಜೀವ ವೈವಿಧ್ಯ ಮಂಡಳಿ
ಎರಡನೇ ಸಮಿತಿ ನೀಡಿರುವ ವರದಿಗೂ ಕಂದಾಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. 3.30 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯ ಕಂದಾಯ ಭೂಮಿಯನ್ನೂ ಒಳಗೊಂಡಿದೆ ಎಂದು ತಕರಾರು ತೆಗೆದಿದೆ. ಗೊಂದಲ ಪರಿಹಾರಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ಪ್ರಕಟಿಸಿ, ಅಹವಾಲು ಆಲಿಸಿ, ತೀರ್ಮಾನ ಕೈಗೊಳ್ಳಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಈಗಾಗಲೇ ಸುತ್ತೋಲೆ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.