ADVERTISEMENT

ದೀಪಾವಳಿ ಹಬ್ಬ | ಹಸಿರು ಪಟಾಕಿ ಮಾರಾಟಕ್ಕಷ್ಟೇ ಅನುಮತಿ

ಎಲ್ಲ ಜಿಲ್ಲಾಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 14:22 IST
Last Updated 19 ಅಕ್ಟೋಬರ್ 2024, 14:22 IST
.
.   

ಬೆಂಗಳೂರು: ವರ್ತಕರು ಈ ಬಾರಿ ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿಯನ್ನಷ್ಟೇ ದಾಸ್ತಾನು, ಮಾರಾಟ ಮಾಡುವುದನ್ನು ಕಡ್ಡಾಯ ಮಾಡಲಾಗುತ್ತಿದೆ.

ಈ ಕುರಿತು ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಿರುವ ಪರಿಸರ ಸಚಿವ ಈಶ್ವರ ಖಂಡ್ರೆ ‘ಹಸಿರು ಪಟಾಕಿಯನ್ನಷ್ಟೇ ತರಿಸುವ, ದಾಸ್ತಾನು ಮಾಡುವ ಹಾಗೂ ಮಾರಾಟ ಮಾಡುವುದಾಗಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪಟಾಕಿ ಮಾರಾಟದ ಮಳಿಗೆಗಳಿಗೆ ಅನುಮತಿ ನೀಡಬೇಕು. ನಿಯಮ ಉಲ್ಲಂಘಿಸಿದವರ ಪರವಾನಗಿ ರದ್ದು ಮಾಡಬೇಕು’ ಎಂದಿದ್ದಾರೆ.

ವಾಯು ಹಾಗೂ ಶಬ್ದ ಮಾಲಿನ್ಯ ತಡೆಯಲು, ಹಿರಿಯ ನಾಗರಿಕರು, ಪುಟ್ಟ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಸುಪ್ರೀಂಕೋರ್ಟ್‌ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶದಂತೆ 125 ಡೆಸಿಬಲ್‌ ಒಳಗಿನ ಶಬ್ದದ ಪಟಾಕಿ ಬಳಸಬೇಕು. ರಾತ್ರಿ 8 ರಿಂದ 10ರವರೆಗೆ ಮಾತ್ರ ಸಿಡಿಸಬೇಕು. ಪರಿಸರಕ್ಕೆ ದಟ್ಟ ಹೊಗೆ ಸೇರಿಸುವ, ರಾಸಾಯನಿಕಯುಕ್ತ, ಭಾರ ಲೋಹದ ಪಟಾಕಿ ಬಳಸಬಾರದು ಎಂದು ಮನವಿ ಮಾಡಿದ್ದಾರೆ. 

ADVERTISEMENT

ಜಾಗೃತಿಗೆ ಮನವಿ: 

ಸಂಘ ಸಂಸ್ಥೆಗಳು, ಶಿಕ್ಷಕರು, ಪರಿಸರ ಪ್ರೇಮಿಗಳು, ಜನಪ್ರತಿನಿಧಿಗಳು ಸೇರಿ ಜನರು ಹಾಗೂ ಮಕ್ಕಳಲ್ಲಿ ಪಟಾಕಿಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ದೀಪ ಹಚ್ಚಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕು ಎಂದು ಖಂಡ್ರೆ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.