ಬೆಂಗಳೂರು: ‘ರಾಜ್ಯದಲ್ಲಿನ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು, ಆಯಾ ಡೀಮ್ಡ್ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ಒಟ್ಟು ಶುಲ್ಕ ಪ್ರಮಾಣದ ಪೈಕಿ ಶೇ75 ರಷ್ಟು ಶುಲ್ಕವನ್ನು ಪ್ರಸಕ್ತ ಶೈಕ್ಷಣಿಕ ಸಾಲಿಗೆ ತಾತ್ಕಾಲಿಕವಾಗಿ ಪಾವತಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.
ಶುಲ್ಕದ ಪ್ರಮಾಣವನ್ನು ಶೇ 8ರಷ್ಟು ಹೆಚ್ಚಿಸಿರುವ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿಯ ಕ್ರಮ ಪ್ರಶ್ನಿಸಿ ಮೈಸೂರಿನ ಜೆ.ಎಸ್.ಎಸ್.ಅಕಾಡೆಮಿಯ ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯ ಸೇರಿದಂತೆ ನಾಲ್ಕು ಡೀಮ್ಡ್ ವಿಶ್ವವಿದ್ಯಾಲಯಗಳು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ಮೊಹಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಈ ಕುರಿತಂತೆ ಮಧ್ಯಂತರ ಆದೇಶ ನೀಡಿದೆ.
‘ಶೇ 75ರಷ್ಟು ಶುಲ್ಕ ಪಾವತಿಸಿಕೊಳ್ಳುವುದು ಈ ಅರ್ಜಿಗಳ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ. ಒಂದು ವೇಳೆ ಡೀಮ್ಡ್ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ಶುಲ್ಕ ಹೆಚ್ಚಳವಾಗಿದೆ ಎಂದು ನ್ಯಾಯಾಲಯ ಆದೇಶಿಸಿದರೆ, ಹೆಚ್ಚುವರಿಯಾಗಿ ಪಡೆದ ಶುಲ್ಕವನ್ನು ಮುಂದಿನ ಸಾಲಿಗೆ ಹೊಂದಾಣಿಕೆ ಮಾಡಬೇಕು’ ಎಂದು ನ್ಯಾಯಪೀಠ ಸೂಚಿಸಿದೆ.
‘ನಿಗದಿಪಡಿಸಿರುವ ಶುಲ್ಕ ನ್ಯಾಯಸಮ್ಮತವಾಗಿದೆ ಎಂದು ಆದೇಶ ಹೊರಬಿದ್ದರೆ ಉಳಿದ ಶೇ 25ರಷ್ಟು ಹಣವನ್ನು ಪಾವತಿಸುವುದಾಗಿ ದೃಢೀಕರಿಸಿದ ಮುಚ್ಚಳಿಕೆ ಪತ್ರಗಳನ್ನು ವಿದ್ಯಾರ್ಥಿಗಳಿಂದ ಪಡೆಯಬೇಕು’ ಎಂದೂ ಸ್ಪಷ್ಟಪಡಿಸಲಾಗಿದೆ.
ಆಕ್ಷೇಪಣೆ ಏನು?: ‘ನಮ್ಮ ಕಾಲೇಜುಗಳ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಶುಲ್ಕ ನಿಗದಿ ಮಾಡುವ ಅಧಿಕಾರ ಸರ್ಕಾರ ಹಾಗೂ ಶುಲ್ಕ ನಿಯಂತ್ರಣ ಸಮಿತಿಗೆ ಇಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
‘ನಾವು ಶುಲ್ಕ ಪ್ರಮಾಣವನ್ನು ಶೇ 40ರಷ್ಟು ಹೆಚ್ಚಿಸುವಂತೆ ಕೋರಿದ್ದೆವು. ಆದರೆ, ಶುಲ್ಕ ನಿಯಂತ್ರಣ ಸಮಿತಿ ಅದನ್ನು ಬದಿಗೊತ್ತಿ ಕೇವಲ ಶೇ 8ರಷ್ಟು ಶುಲ್ಕ ಹೆಚ್ಚಿಸಿದೆ. ಇದು ನ್ಯಾಯಸಮ್ಮತವಾಗಿಲ್ಲ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಕೆ.ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.