ನವದೆಹಲಿ: ತಮ್ಮ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯನ್ನು ಹಿಂಪಡೆಯಲು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠಕ್ಕೆ, ‘ಇಬ್ಬರು ಕೂಡ ಇತ್ಯರ್ಥಕ್ಕೆ ಬರಲು ಸಾಧ್ಯವಾಗಿಲ್ಲ. ಉಭಯ ಅಧಿಕಾರಿಗಳು ಪ್ರಕರಣದ ವಿಚಾರಣೆಯೊಂದಿಗೆ ಮುಂದುವರಿಯಲಿದ್ದಾರೆ’ ಎಂದು ವಕೀಲರು ತಿಳಿಸಿದರು. ಬಳಿಕ ಪೀಠವು ಅರ್ಜಿ ಹಿಂಪಡೆಯಲು ಒಪ್ಪಿತು.
ಸಿಂಧೂರಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ‘ತಾವು ಸಲಹೆ ನೀಡಿದರೂ ರೂಪಾ ಅವರು ಇತ್ಯರ್ಥಕ್ಕೆ ಒಪ್ಪಲಿಲ್ಲ’ ಎಂದರು. ಇಬ್ಬರೂ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.
ವಿಚಾರಣೆ ವೇಳೆ ನ್ಯಾಯಪೀಠ, ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳನ್ನು ಮಾಡಿರುವ ರೂಪಾ ಅವರ ಉದ್ದೇಶವನ್ನು ಪ್ರಶ್ನಿಸಿತು.
‘ನಿಮ್ಮ ಕಕ್ಷಿದಾರರು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹೇಳಿಕೆಗಳನ್ನು ಏಕೆ ನೀಡಿದರು? ಪ್ರತಿವಾದಿ ವಿರುದ್ಧ ಇಂತಹ ಆರೋಪಗಳನ್ನು ಮಾಡಲು ನಿಮ್ಮ ಕಕ್ಷಿದಾರರು ತನಿಖಾಧಿಕಾರಿಯೇ’ ಎಂದು ರೂಪಾ ವಕೀಲರನ್ನು ಪ್ರಶ್ನಿಸಿತು. ರೂಪಾ ಪರ ವಕೀಲರು, ‘ನನ್ನ ಕಕ್ಷಿದಾರರು ಸಿಂಧೂರಿ ಅವರ ಅಕ್ರಮಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು’ ಎಂದು ಗಮನ ಸೆಳೆದರು.
ಆಗ ನ್ಯಾಯಪೀಠವು, ‘ಈ ಬಗ್ಗೆ ಇಲಾಖೆಯೊಳಗೆ ದೂರು ಸಲ್ಲಿಸಬಹುದಿತ್ತು ಅಲ್ಲವೇ’ ಎಂದು ಕೇಳಿತು. ‘ನೀವು ಆಕೆಯ ಮೇಲೆ ನೇರವಾಗಿ ಆರೋಪ ಮಾಡಲು ನಿರ್ಧರಿಸಿದ್ದೀರಿ. ಇದು ಮಾನಹಾನಿಯಲ್ಲವೇ. ನಿಮಗೆ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ಪ್ರತಿಯೊಂದು ಅಂಶವೂ ಗೊತ್ತಿದೆ. ಆದರೂ, ಇದನ್ನು ಮಾಡಿದ್ದೀರಿ’ ಎಂದು ಹೇಳಿತು.
ಜತೆಗೆ, ಇಬ್ಬರೂ ಈ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳುವುದು ಸೂಕ್ತ. ಅದರ ಹೊರತಾಗಿ ನ್ಯಾಯಾಂಗ ಹೋರಾಟಕ್ಕೆ ಮುಂದಾದಲ್ಲಿ ಅದು ಇಬ್ಬರ ವೃತ್ತಿ ಜೀವನಕ್ಕೆ ತೊಂದರೆ ಉಂಟು ಮಾಡಬಹುದು ಎಂದು ನ್ಯಾಯಪೀಠ ಕಿವಿಮಾತು ಹೇಳಿತು. ಅಲ್ಲದೇ, ‘ಇಬ್ಬರು ಅಧಿಕಾರಿಗಳು ತಮ್ಮ ಕೆಲಸಗಳಿಗೆ ಗಮನ ಕೊಡುವುದಕ್ಕಿಂತ ಹೆಚ್ಚಿನ ಸಮಯ ವಕೀಲರ ಕಚೇರಿಗಳಲ್ಲಿ ಕಳೆಯುತ್ತಿದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
ಇತ್ಯರ್ಥದ ಸಲಹೆಯನ್ನು ಒಪ್ಪದ ಸಿಂಧೂರಿ ಪರ ವಕೀಲರು, ‘ನನ್ನ ಕಕ್ಷಿದಾರರ ಘನತೆಗೆ ಭಾರಿ ಹಾನಿಯಾಗಿದೆ. ಆದ್ದರಿಂದ ಸಿಂಧೂರಿ ಅವರು ರಾಜಿಸಂಧಾನದಲ್ಲಿ ನಂಬಿಕೆ ಇಟ್ಟಿಲ್ಲ ಮತ್ತು ಪ್ರಕರಣ ಮೆರಿಟ್ ಮೇಲೆ ಇತ್ಯರ್ಥವಾಗಬೇಕು ಎಂದು ಬಯಸುತ್ತಿದ್ದಾರೆ’ ಎಂದರು.
ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ಗಳನ್ನು ತೆಗೆಯುವಂತೆ ರೂಪಾ ಅವರಿಗೆ ನ್ಯಾಯಾಲಯವು 2023ರ ಡಿಸೆಂಬರ್‌ನಲ್ಲಿ ನಿರ್ದೇಶನ ನೀಡಿತ್ತು.
ಪ್ರಕರಣವೇನು?: ‘ನನ್ನ ವಿರುದ್ಧ ರೂಪಾ ಮೌದ್ಗಿಲ್ 2023ರ ಫೆಬ್ರುವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ. ಇದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮಾನಸಿಕ ಯಾತನೆ ಉಂಟು ಮಾಡಿದೆ’ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾರ್ಚ್ 3ರಂದು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
‘ಮಾನಹಾನಿ ಮತ್ತು ಮಾನಸಿಕ ಯಾತನೆ ಉಂಟು ಮಾಡಿರುವುದಕ್ಕಾಗಿ ರೂಪಾ ಅವರಿಂದ ₹1 ಕೋಟಿ ಮೊತ್ತವನ್ನು ಪರಿಹಾರ ರೂಪವಾಗಿ ಕೊಡಿಸಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದರು. ದೂರು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಮಾರ್ಚ್ 24ರಂದು ಆದೇಶಿಸಿತ್ತು. ಈ ಆದೇಶ ಮತ್ತು ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿ ರೂಪಾ 2023ರ ಮೇ 31ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.