ADVERTISEMENT

ರಮ್ಯಾ ಮಾನಹಾನಿ ಪ್ರಕರಣದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ  ₹50 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 8 ಮೇ 2019, 18:26 IST
Last Updated 8 ಮೇ 2019, 18:26 IST
   

ಬೆಂಗಳೂರು: ‘ಏಷ್ಯಾನೆಟ್‌ ನ್ಯೂಸ್‌ನೆಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಅಧೀನದ ಸುವರ್ಣ ನ್ಯೂಸ್‌ (ಕನ್ನಡ) ಟಿ.ವಿ ಚಾನೆಲ್‌ನಲ್ಲಿ ಚಿತ್ರನಟಿ ರಮ್ಯಾ (ದಿವ್ಯ ಸ್ಪಂದನ) ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ರಮ್ಯಾ ಅವರಿಗೆ ಏಷ್ಯಾನೆಟ್‌ ಕಂಪನಿ ₹ 50 ಲಕ್ಷ ಪರಿಹಾರ ನೀಡಬೇಕು’ ಎಂದು ನಗರದ ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

‘2013ರಲ್ಲಿ ನಡೆದ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ನನ್ನನ್ನು ಅನ್ಯಾಯವಾಗಿ ಸಿಲುಕಿಸಿ ಅವಹೇಳನಕಾರಿ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ’ ಎಂದು ಆರೋಪಿಸಿ ರಮ್ಯಾ ಅವರು ಚಾನೆಲ್‌ ಮತ್ತು ಕಂಪನಿ ವಿರುದ್ಧ ಸಿವಿಲ್‌ ದಾವೆ ಹೂಡಿದ್ದರು.

ಈ ಕುರಿತ ಆದೇಶವನ್ನು 2019ರ ಏಪ್ರಿಲ್‌ 26ರಂದು ಎಂಟನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ‍ಪಾಟೀಲ ನಾಗಲಿಂಗನಗೌಡ ಅವರು ಪ್ರಕಟಿಸಿದ್ದಾರೆ. ‘ಈ ಆದೇಶ ಪ್ರಕಟಿಸಿದ ಎರಡು ತಿಂಗಳ ಒಳಗಾಗಿ ಪ್ರತಿವಾದಿಗಳು ರಮ್ಯಾ ಅವರಿಗೆ ಪರಿಹಾರ ನೀಡಬೇಕು’ ಎಂದು ನಿರ್ದೇಶಿಸಿದ್ದಾರೆ.

ADVERTISEMENT

ನಿರ್ಬಂಧ: ‘ಈ ಹಗರಣದಲ್ಲಿ ನನ್ನನ್ನು ಸೇರಿಸಿ ಭವಿಷ್ಯದಲ್ಲಿ ಪ್ರತಿವಾದಿ ಚಾನೆಲ್‌ ಯಾವುದೇ ಕಾರ್ಯಕ್ರಮ ಬಿತ್ತರಿಸದಂತೆ ಶಾಶ್ವತವಾಗಿ ನಿರ್ಬಂಧಿಸಬೇಕು’ ಎಂಬ ರಮ್ಯಾ ಅವರ ಮನವಿಯನ್ನೂ ನ್ಯಾಯಾಧೀಶರು ಮಾನ್ಯ ಮಾಡಿದ್ದಾರೆ.

ಪತ್ರಿಕ್ಯೋದ್ಯಮ ನೀತಿ ನಾಶ: ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದ ರಮ್ಯಾ ಅವರು, ಬೆಟ್ಟಿಂಗ್ ಮತ್ತು ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಈ ಪ್ರಕರಣದಲ್ಲಿ ಚಾನೆಲ್‌ ಸಂಪೂರ್ಣವಾಗಿ ಪತ್ರಿಕೋದ್ಯಮ ನೀತಿಗಳನ್ನೇ ನಾಶ ಮಾಡಿದೆ. ರಮ್ಯಾ ಅವರಿಗಿರುವ ಘನತೆಯನ್ನು ಹಾಳುಮಾಡಲು ದುರ್ಭಾವಪೂರ್ಣವಾಗಿ ವರ್ತಿಸಿದೆ’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

‘ರಮ್ಯಾ ಅವರು ನಿಷ್ಕಳಂಕ ವ್ಯಕ್ತಿತ್ವ ಹೊಂದಿದ ಕನ್ನಡದ ಉತ್ತಮ ನಟಿ. ಅವರು ಸಂಸದೆ ಆಗಿಯೂ ಕೆಲಸ ನಿರ್ವಹಿಸಿದ್ದಾರೆ. ಇಂತಹವರ ವಿರುದ್ಧ ಮಾನಹಾನಿಕಾರಕ ಸುದ್ದಿ ಪ್ರಸಾರ ಮಾಡಿರುವ ಚಾನೆಲ್, ಸಮಾಜದಲ್ಲಿ ಆಕೆಗಿರುವ ಗೌರವವನ್ನು ಕಡಿಮೆ ಆಗುವಂತೆ ಮಾಡಿದೆ. ಗೌರವ ಎಂಬುದು ವ್ಯಕ್ತಿಯೊಬ್ಬರ ಮೌಲ್ಯಯುತ ಆಸ್ತಿ. ಅದನ್ನು ಹಣಕ್ಕೆ ಹೋಲಿಸಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ಭರಿಸಲಾಗದ ನಷ್ಟ ಉಂಟು ಮಾಡಲಾಗಿದೆ’ ಎಂದು ನ್ಯಾಯಾಧೀಶರು ಆದೇಶದಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.