ADVERTISEMENT

ಸಚಿವೆ ನಿರ್ಮಲಾ ಸೀತಾರಾಮನ್‌ ವೇಳಾಪಟ್ಟಿಯನ್ನು ಪಾಲಿಸಿದರೇ...ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 13:31 IST
Last Updated 25 ಆಗಸ್ಟ್ 2018, 13:31 IST
   

ನವದೆಹಲಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಕೋಪಗೊಂಡಿದ್ದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್‌ ಮತ್ತು ಸಾ.ರಾ.ಮಹೇಶ್ ಇಬ್ಬರೂ ಸ್ಪಷ್ಟನೆಗಳನ್ನು ನೀಡಿದ್ದಾರೆ.

ರಕ್ಷಣಾ ಸಚಿವರ ಕಾರ್ಯಾಲಯ ಬಿಡುಗಡೆ ಮಾಡಿರುವ ಈ ಸ್ಪಷ್ಟನೆಯಲ್ಲಿ 'ರಕ್ಷಣಾ ಸಚಿವರು ಜಿಲ್ಲಾಡಳಿತ ನಿಗದಿ ಪಡಿಸಿದ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದರು ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸಿ ಅಧಿಕಾರಿಗಳ ಜೊತೆಗಿನ ಸಭೆಗೆ ಬರುವಂತೆ ಒತ್ತಾಯಿಸಿದರು' ಎಂದು ಹೇಳಲಾಗಿದೆ.

ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಸ್ಪಷ್ಟನೆ ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಿದ್ದು 'ರಕ್ಷಣಾ ಸಚಿವರು ವೇಳಾಪಟ್ಟಿಯಂತೆ ಯಾವ ಕಾರ್ಯಕ್ರಮಕ್ಕೂ ಬರಲಿಲ್ಲ. ಅವರಿಗೆ ಯಾರು ನಿರ್ದೇಶನ ನೀಡುತ್ತಿದ್ದರೋ ಗೊತ್ತಿಲ್ಲ' ಎನ್ನುತ್ತಿದೆ.

ADVERTISEMENT

ಕಾರ್ಯಕ್ರಮದ ವೇಳಾಪಟ್ಟಿಯನ್ನು ರೂಪಿಸಿರುವ ಜಿಲ್ಲಾಡಳಿತ ಈ ಬಗ್ಗೆಪ್ರತಿಕ್ರಿಯಿಸಲು ನಿರಾಕರಿಸಿದೆ. ಜಿಲ್ಲಾಧಿಕಾರಿ ಈ ವಿಷಯದ ಕುರಿತಂತೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು 'ಪ್ರಜಾವಾಣಿ'ಗೆ ತಿಳಿಸಿದರು.

ಏನಿದು ಘಟನೆ
ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಭಾರಿ ಮಳೆ, ಭೂಕುಸಿತದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು. ಪ್ರವಾಹ ಪೀಡಿತ ಪ್ರದೇಶಗಳು ಮತ್ತು ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ಮಾಡುವ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿತ್ತು. ಈ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಕೊಠಡಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರಿಗೆ ಜಿಲ್ಲೆಯ ನಿವೃತ್ತ ಯೋಧರು ತಮ್ಮ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸುತ್ತಿದ್ದರು. ಆಗ ಮಹೇಶ್‌ ಅವರು, ‘ರಕ್ಷಣಾ ಸಚಿವರು ಜಿಲ್ಲೆಗೆ ಭೇಟಿ ನೀಡಿರುವ ಉದ್ದೇಶವೇ ಬೇರೆಯಾಗಿದ್ದು, ಆ ಮೇಲೆ ನಿಮ್ಮ ಸಮಸ್ಯೆ ತಿಳಿಸಿ. ಜಿಲ್ಲಾಮಟ್ಟದ ಅಧಿಕಾರಿಗಳು ಸಚಿವರಿಗೆ ಕಾದು ಕುಳುತ್ತಿದ್ದಾರೆ. ಅವರೆಲ್ಲರೂ ಪುನರ್ವಸತಿ ಕಾರ್ಯಕ್ಕೆ ತೆರಳಬೇಕು’ ಎಂದು ಹೇಳಿದರು. ಮೊದಲು ಅಧಿಕಾರಿಗಳ ಸಭೆ ನಡೆಸುವಂತೆಯೂ ನಿರ್ಮಲಾ ಸೀತಾರಾಮನ್‌ ಅವರಲ್ಲಿ ಕೋರಿದರು.

‘ಪೂರ್ವ ನಿಗದಿಯಂತೆಯೇ ನಾನು ಸಾರ್ವಜನಿಕರನ್ನು ಭೇಟಿ ಆಗುತ್ತಿರುವೆ. ಜಿಲ್ಲಾಡಳಿತ ನಿಗದಿಗೊಳಿಸಿದ ಸ್ಥಳಕ್ಕೆ, ಆಯಾ ಸಮಯದಲ್ಲೇ ಭೇಟಿ ಕೊಟ್ಟಿರುವೆ. ನಿವೃತ್ತ ಯೋಧರ ಸಮಸ್ಯೆ ನನ್ನ ಇಲಾಖೆಗೆ ಸಂಬಂಧಿಸಿದ್ದು. ಸಮಸ್ಯೆ ಆಲಿಸುವುದೂ ಕರ್ತವ್ಯ. ನನ್ನ ಪರಿವಾರವೂ ಮುಖ್ಯ ಅಲ್ಲವೇ? ಜಿಲ್ಲಾ ಸಚಿವರಿಂದ ನಾನು ಹೇಳಿಸಿಕೊಳ್ಳಬೇಕಿಲ್ಲ’ ಎಂದು ಮಹೇಶ್ ವಿರುದ್ಧ ಸಿಟ್ಟಾದರು.

ನಿರ್ಮಲಾ ಸೀತಾರಾಮನ್ ಅವರ ಈ ಸಿಟ್ಟಿನ ಮಾತುಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೇಂದ್ರ ಸಚಿವರು ರಾಜ್ಯದ ಸಚಿವರು ತನ್ನ ಅಧೀನದಲ್ಲಿರುವಂತೆ ನಡೆಸಿಕೊಂಡಿದ್ದಾರೆ ಎಂದು ಹಲವರು ಟೀಕಿಸಿದ್ದರು.

ಸಚಿವೆ ನಿರ್ಮಲ ಸೀತಾರಾಮನ್‌ ಸ್ಪಷ್ಟನೆ

ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್‌ ಇಂದು ಸ್ಪಷ್ಟನೆ ನೀಡಿದ್ದಾರೆ.

ರಕ್ಷಣಾ ಮಂತ್ರಿಗಳ ಪ್ರವಾಸ ಕಾರ್ಯಕ್ರಮವನ್ನು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಕೊಡಗು ಜಿಲ್ಲಾ ಆಡಳಿತವೇ ಅಂತಿಮಗೊಳಿಸಿತ್ತು. ರಕ್ಷಣಾ ಮಂತ್ರಿಗಳು ಭೇಟಿ ನೀಡುವ ಎರಡು ದಿನ ಮೊದಲೇ ಸಂಬಂಧಪಟ್ಟವರೆಲ್ಲರಿಗೂ ಪ್ರವಾಸದ ವಿವರ ಕಳುಹಿಸಲಾಗಿತ್ತು. ನಂತರ ಜಿಲ್ಲಾಡಳಿತದ ಮನವಿ ಮೇರೆಗೆ ಸ್ಥಳೀಯ ಗಣ್ಯರೊಂದಿಗೆ ಸಂವಾದ ಕಾರ್ಯಕ್ರವನ್ನು ಪಟ್ಟಿಗೆ ಸೇರಿಸಲಾಯಿತು.

ಹಾನಿಗೀಡಾದ ಪ್ರದೇಶಗಳ ಭೇಟಿಯ ನಂತರ ನೆರೆಯಿಂದ ತೀವ್ರ ತೊಂದರೆಗೊಳಗಾದ ನಿವೃತ್ತ ಸೈನಿಕರೊಂದಿಗೆ ರಕ್ಷಣಾ ಮಂತ್ರಿಗಳು ಸಂವಾದ ನಡೆಸುವಾಗ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಸಭೆಯನ್ನು ಮೊದಲು ನಡೆಸಬೇಕಿತ್ತು ಎನ್ನುವುದು ಅವರ ವಾದವಾಗಿತ್ತು. ಆದರೆ ನಿವೃತ್ತ ಸೈನಿಕರ ಯೋಗಕ್ಷೇಮವೂ ರಕ್ಷಣಾ ಇಲಾಖೆಯ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಸಚಿವರಿಗೆ ಸ್ಪಷ್ಟನೆ ನೀಡಿದರು. ಆದರೂ ಸಾ.ರಾ. ಮಹೇಶ್ ತಕ್ಷಣ ಆ ಸಭೆ ನಿಲ್ಲಿಸಿ ಅಧಿಕಾರಿಗಳೊಂದಿಗೆ ಸಭೆಗೆ ಹೋಗಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಆಡಳಿತ ಅಂತಿಮಗೊಳಿಸಿದ ಕಾರ್ಯಕ್ರಮದ ಪ್ರಕಾರವೇ ಸಭೆ ನಡೆಸಲಾಯಿತು. ಸಚಿವ ಸಾ.ರಾ. ಮಹೇಶ್‌ ನೀಡಿದ ಪ್ರತಿಕ್ರಿಯೆ ದುರದೃಷ್ಟಕರ. ತನ್ನ ವಿರುದ್ಧ ಮಾಡಿರುವ ಟೀಕೆಯು ಕೀಳು ಅಭಿರುಚಿಯಿಂದ ಕೂಡಿದೆ. ಈ ನಡವಳಿಕೆ ಪ್ರತಿಕ್ರಿಯೆಗೂ ಯೋಗ್ಯವಲ್ಲ ಎಂದು ನಿರ್ಮಲ ಸೀತಾರಾಮನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಪರಿವಾರಕ್ಕೂ ಸ್ಪಷ್ಟನೆ:ಪತ್ರಿಕಾಗೋಷ್ಠಿಯಲ್ಲಿ ’ಪರಿವಾರ’ ಎಂಬ ಪದ ಬಳಕೆ ಮಾಡಲಾಗಿತ್ತು. ಇದನ್ನು ಕೆಲವರು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರಿರುತ್ತಾರೆ ಎಂಬ ಅರ್ಥದಲ್ಲಿ ಈ ಪದ ಬಳಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ರಕ್ಷಣಾ ಸಚಿವರಿಗೆ ತಾಳ್ಮೆ ಅಗತ್ಯ: ಸಚಿವ ಸಾ.ರಾ.ಮಹೇಶ್‌
ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ವಿರುದ್ಧ ಶುಕ್ರವಾರ ಗರಂ ಆಗಿದ್ದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ– ವಿವಾದಕ್ಕೆ ಕಾರಣವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ.

‘ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನನ್ನ ಮೇಲೆ ಸಿಟ್ಟಾಗಿದ್ದರೂ ಕೊಡಗಿಗೆ ₹ 500 ಕೋಟಿ ಘೋಷಣೆ ಮಾಡುವ ನಿರೀಕ್ಷೆಯಲ್ಲಿ ತಾಳ್ಮೆ ಕಳೆದುಕೊಳ್ಳಲಿಲ್ಲ. ಕೋಪಗೊಂಡರು ಹೆಚ್ಚು ಮಾತನಾಡಲಿಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಹೆಣ್ಣು ಮಗಳು ತಾಳ್ಮೆ ಕಳೆದುಕೊಂಡರೆ ರಾಷ್ಟ್ರದ ಭದ್ರತೆಯನ್ನು ಹೇಗೆ ಕಾಪಾಡಲಿದ್ದಾರೆ’ ಎಂದು ಮಹೇಶ್‌ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಅವರಂತೆಯೇ ನಾನು ಪ್ರತ್ಯುತ್ತರ ನೀಡಿದ್ದರೆ ಪರಿಸ್ಥಿತಿ ಬೇರೆ ಆಗುತ್ತಿತ್ತು. ಪೂರ್ವ ನಿಗದಿಯಂತೆ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೇನೆ ಎಂದು ಸಚಿವರು ಹೇಳಿದರು. ವೇಳಾಪಟ್ಟಿಯಂತೆ ಯಾವ ಸ್ಥಳಕ್ಕೂ ಬರಲಿಲ್ಲ. ಅವರಿಗೆ ಯಾರು ನಿರ್ದೇಶನ ಮಾಡಿದರೋ ಗೊತ್ತಿಲ್ಲ’ ಎಂದು ದೂರಿದರು.

‘ನಿಮಗೆ ಅಧಿಕಾರಿಗಳೇ ಮುಖ್ಯವೇ ಎಂದೂ ‍ಪ್ರಶ್ನಿಸಿದರು. ಅಧಿಕಾರಿಗಳು ಮುಖ್ಯ ಎನ್ನುವ ವಿಚಾರ ಈಗ ಅಪ್ರಸ್ತುತ. ಜನರ ನೋವಿಗೆ ಮೊದಲು ಸ್ಪಂದಿಸಬೇಕೆಂಬು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ತಾರತಮ್ಯ ಮಾಡದೇ ಪರಿಹಾರ ಹಣ ಬಿಡುಗಡೆ ಮಾಡಲಿ. ಕೇರಳಕ್ಕೆ ಯಾವುದೇ ವರದಿ ಪಡೆಯದೇ ಹಣ ಬಿಡುಗಡೆ ಮಾಡಲಾಗಿದೆ. ಅದೇ ಮಾದರಿಯಲ್ಲೂ ಕರ್ನಾಟಕಕ್ಕೂ ಪರಿಹಾರ ಘೋಷಣೆ ಮಾಡಬೇಕು’ ಎಂದು ಕೋರಿದರು.

‘ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ ಬಳಿಕವೇ ರಕ್ಷಣಾ ಸಚಿವರ ಕಾರ್ಯಕ್ರಮದ ವೇಳಾಪಟ್ಟಿ ನಿಗದಿ ಮಾಡಲಾಗಿತ್ತು. ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆಯ ಪರಿಶೀಲನೆ, ಬಳಿಕ ಮಡಿಕೇರಿ ಮೈತ್ರಿ ಹಾಲ್‌ನ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ, ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಿಗದಿ ಆಗಿತ್ತು. ಇದೇ ಮಾದರಿಯಲ್ಲಿ ಪ್ರವಾಸದ ವೇಳಾಪಟ್ಟಿಯೂ ಇತ್ತು. ನಾನು ಕುವೆಂಪು ಬಡಾವಣೆಯಲ್ಲಿ ಸಚಿವರಿಗೆ ಕಾದು ನಿಂತಿದ್ದೆ. ಆದರೆ, ಅವರು ಅಲ್ಲಿಗೆ ಬರಲಿಲ್ಲ’ ಎಂದು ದೂರಿದರು.

‘ಬಳಿಕ ಮೈತ್ರಿ ಹಾಲ್‌ಗೆ ತೆರಳಿದೆ. ಅಲ್ಲಿಗೂ ಬರಲಿಲ್ಲ. ಅವರು ಸೇವಾ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿಯೇ ಸಚಿವರನ್ನು ಸ್ವಾಗತಿಸಿದೆ. ಆನಂತರ ಮೈತ್ರಿಗೆ ಬಂದರು’ ಎಂದು ಹೇಳಿದರು.

‘ಜಿಲ್ಲಾಧಿಕಾರಿ ಅವರ ಕೊಠಡಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬೇರೆಯವರೊಂದಿಗೆ ಚರ್ಚೆ ನಡೆಸುತ್ತಿದ್ದರು. ನಂತರ, ಮತ್ತೊಂದು ಸಭೆಗೆ ಹೋಗಲು ಸಿದ್ಧರಾಗಿದ್ದರು. ಆಗ ನಾನು, ಶಾಸಕ ಕೆ.ಜಿ. ಬೋಪಯ್ಯ ಅವರು ಅಧಿಕಾರಿಗಳ ಸಭೆಗೆ ಬರುವಂತೆ ಕೋರಿದೆವು. ಅದೇ ವಿಚಾರದಲ್ಲಿ ಸಭೆಗೆ ಬಂದವರು ಅಷ್ಟೊಂದು ಸಿಟ್ಟಾಗಿ ಮಾತನಾಡಿದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.