ಬೆಂಗಳೂರು: ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ, ಸರ್ಕಾರಿ ಕಾಲೇಜುಗಳಲ್ಲಿ ಶೇ 20ರಷ್ಟು ಪಠ್ಯಕ್ರಮವೂ ಪೂರ್ಣಗೊಂಡಿಲ್ಲ.
‘ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಯುತ್ತಿವೆ. ಆದರೆ, ನಮಗೆ ಆನ್‌ಲೈನ್ ತರಗತಿಗಳೂ ಸರಿಯಾಗಿ ನಡೆಯುತ್ತಿಲ್ಲ. ತರಗತಿಯಲ್ಲಿ ಚೆನ್ನಾಗಿ ಮಾಡುತ್ತಿದ್ದ ಉಪನ್ಯಾಸಕರ ಪಾಠವೂ ಆನ್‌ಲೈನ್‌ನಲ್ಲಿ ಸರಿಯಾಗಿ ಅರ್ಥ ಆಗುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆ, ಸಮಯದ ಅಭಾವ ಎಂದು ರಾತ್ರಿ 7.30ರ ನಂತರ ಕೆಲವರು ಆನ್‌ಲೈನ್ ತರಗತಿ ತೆಗೆದುಕೊಳ್ಳುತ್ತಾರೆ. ಈವರೆಗೆ ಶೇ 20ರಷ್ಟು ಪಠ್ಯಕ್ರಮವೂ ಪೂರ್ಣಗೊಂಡಿಲ್ಲ’ ಎಂದು ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡನೇ ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಜಿ. ಜೀವನ್ ಹೇಳಿದರು.
‘ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಿರುವುದರಿಂದ ನಮಗೂ ಕಾಲೇಜು ಪ್ರಾರಂಭಿಸಿದರೆ ಉತ್ತಮ. ಇಲ್ಲದಿದ್ದರೆ ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ’ ಎಂದು ಸರ್ಕಾರಿ ಕಲಾ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿನಿ ರಂಜಿತಾ ಹೇಳಿದರು.
‘ಮಗಳು ಸರ್ಕಾರಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದಾಳೆ. ಆನ್‌ಲೈನ್ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಟ್ಯೂಷನ್‌ಗೆ ಕಳಿಸುವಷ್ಟು ಆರ್ಥಿಕವಾಗಿ ನಾವು ಸಬಲರಾಗಿಲ್ಲ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪದವಿಯ ಎಲ್ಲ ತರಗತಿಗಳನ್ನು ಪುನರಾರಂಭಿಸಬೇಕು’ ಎಂದು ಪೋಷಕ ಸುರೇಶ್‌ಕುಮಾರ್ ಒತ್ತಾಯಿಸಿದರು.
ಗ್ರಂಥಾಲಯ ಪುಸ್ತಕಗಳೂ ಇಲ್ಲ:
‘ಸರ್ಕಾರಿ ಕಾಲೇಜುಗಳ ಬಹುತೇಕ ಹಿರಿಯ ಉಪನ್ಯಾಸಕರಿಗೆ ಆನ್‌ಲೈನ್ ತರಗತಿ ನಡೆಸುವುದು ಕಷ್ಟವಾಗುತ್ತಿದೆ. ಕಾಲೇಜುಗಳ ಗ್ರಂಥಾಲಯದಲ್ಲಿನ ಪುಸ್ತಕ ಓದಲೂ ಅವಕಾಶವಿಲ್ಲ. ಸರಿಯಾದ ನೋಟ್ಸ್, ಪುಸ್ತಕ ಸಿಗದೆ ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆಯಾಗುತ್ತಿದೆ’ ಎಂದು ಉಪನ್ಯಾಸಕರೊಬ್ಬರು ಹೇಳಿದರು.
ಉಪನ್ಯಾಸಕರ ಕೊರತೆ:
‘ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಫ್‌ಲೈನ್, ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಯನ್ನು ಉಪನ್ಯಾಸಕರು ನಡೆಸಬೇಕಾಗಿದೆ. ಉಪನ್ಯಾಸಕರ ಕೊರತೆ ಇರುವುದರಿಂದ ಸಮಯವೂ ಸಾಲುತ್ತಿಲ್ಲ. 15 ಸಾವಿರ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ಸರ್ಕಾರ ಆದೇಶಿಸಬೇಕು’ಎಂದು ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕರ ಸಂಘ ಡಾ.ಟಿ.ಎಂ.ಮಂಜುನಾಥ ಒತ್ತಾಯಿಸಿದರು.
‘ಪರೀಕ್ಷೆ ನಡೆಸಲು ಸಿದ್ಧವಾಗಿದ್ದೇವೆ ಎಂದು ಖಾಸಗಿ ಕಾಲೇಜುಗಳು ಹೇಳುತ್ತಿವೆ. ಇದೇ 31ಕ್ಕೆ ಕೆಲಸದ ಕೊನೆಯ ದಿನ ಎಂದು ಘೋಷಿಸಿ, ಫೆಬ್ರುವರಿ ಅಥವಾ ಮಾರ್ಚ್‌ಗೆ ಪರೀಕ್ಷೆ ನಡೆಸಿ ಎಂದು ವಿಶ್ವವಿದ್ಯಾಲಯಗಳ ಕುಲಪತಿಗಳೂ ಒತ್ತಡ ಹೇರುತ್ತಿದ್ದಾರೆ. ಖಾಸಗಿ ಮತ್ತು ಅನುದಾನಿತ ಕಾಲೇಜುಗಳಲ್ಲಾದರೆ ಆನ್‌ಲೈನ್ ತರಗತಿ ಚೆನ್ನಾಗಿ ನಡೆದಿದೆ. ಉಪನ್ಯಾಸಕರ ಕೊರತೆಯೂ ಇಲ್ಲ. ನಿಗದಿತ ಪಠ್ಯಕ್ರಮ ಮುಗಿದಿರುವುದರಿಂದ ಆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಷ್ಟವಾಗುವುದಿಲ್ಲ’ ಎಂದರು.
‘ಯುಜಿಸಿ ಅನುಮತಿ ಕೋರಲಾಗಿದೆ’
‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿಗಳು ನಡೆಯುತ್ತಿರುವುದರಿಂದ ಪದವಿಯ ಮೊದಲ–ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಸಲು ಅನುಮತಿ ನೀಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅನುಮತಿ ಕೋರಲಾಗಿದೆ. ಯುಜಿಸಿ ಹಸಿರು ನಿಶಾನೆ ಕೊಟ್ಟ ತಕ್ಷಣವೇ ಎಲ್ಲ ತರಗತಿಗಳನ್ನೂ ಪ್ರಾರಂಭಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
‘ಅತಿಥಿ ಉಪನ್ಯಾಸಕರ ಮುಂದುವರಿಕೆಗೆ ಹಣಕಾಸು ಇಲಾಖೆಯಿಂದಲೂ ಒಪ್ಪಿಗೆ ದೊರೆತಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಪ್ರಕ್ರಿಯೆ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.
430
ರಾಜ್ಯದಲ್ಲಿನ ಸರ್ಕಾರಿ ಪದವಿ ಕಾಲೇಜುಗಳ ಸಂಖ್ಯೆ
300
ರಾಜ್ಯದಲ್ಲಿನ ಅನುದಾನಿತ ಪದವಿ ಕಾಲೇಜುಗಳ ಅಂದಾಜು ಸಂಖ್ಯೆ
7000
ಸರ್ಕಾರಿ ಕಾಲೇಜುಗಳಲ್ಲಿನ ಕಾಯಂ ಬೋಧಕ ಸಿಬ್ಬಂದಿ
15000
ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಖ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.