ಬೆಂಗಳೂರು: ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ ಎನ್ನುವುದಕ್ಕೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೊಲೀಸರ ಮೂಲಕ ನೀಡುತ್ತಿರುವ ಕಿರುಕುಳವೇ ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಭಾರತ್ ಜೋಡೊ ಯಾತ್ರೆ ವೇಳೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರ ಸಂಗ್ರಹಿಸುವುದಕ್ಕಾಗಿ ನೋಟಿಸ್ ಜಾರಿ ಮಾಡಿರುವ ದೆಹಲಿ ಪೊಲೀಸರು ಭಾನುವಾರ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಹೋರಾಟ ನಿಲ್ಲದು, ಇಡೀ ದೇಶ ಅವರ ಜೊತೆಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಮಹಿಳೆಯರೆಲ್ಲರೂ ಸುರಕ್ಷಿತರಾಗಿದ್ದಾರೆಯೇ? ಅವರ ಮೇಲೆ ಯಾವುದೇ ದೌರ್ಜನ್ಯಗಳು ನಡೆಯುತ್ತಿಲ್ಲವೇ? ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವ ಬದಲಿಗೆ ದೂರುದಾರರ ಬೆನ್ನು ಹತ್ತಿರುವ ಸರ್ಕಾರದ ದುರುದ್ದೇಶ ಅರ್ಥವಾಗದಷ್ಟು ದೇಶದ ಜನ ಮೂರ್ಖರಲ್ಲ ಎಂದು ಹೇಳಿದ್ದಾರೆ.
ಉದ್ಯಮಿ ಅದಾನಿ ಹಗರಣಗಳ ಬಗ್ಗೆ ದನಿ ಎತ್ತಿದ ದಿನದಿಂದ ಪ್ರಧಾನಿ ಮೋದಿ ಅವರ ಬಿಜೆಪಿ ಸರ್ಕಾರ ರಾಹುಲ್ ಗಾಂಧಿ ಅವರ ಬೆನ್ನು ಹತ್ತಿದೆ ಎಂದರೆ ಆರೋಪದಲ್ಲಿ ಸತ್ಯ ಇದೆ ಎಂದರ್ಥ ಅಲ್ಲವೇ? ಕಳ್ಳರ ಮನಸ್ಸು ಹುಳ್ಳಗೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ-ಗೌರವ ಇರುವುದಾಗಿದ್ದರೆ ಮೊದಲು ತಮ್ಮ ಪಕ್ಷದಲ್ಲಿ ಮಹಿಳಾ ಪೀಡನೆಯ ಆರೋಪ ಹೊತ್ತಿರುವವರ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಿ. ಆರೋಪಿಗಳ ಪಟ್ಟಿ ಉದ್ದ ಇದೆ ಎಂದು ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ಟ್ಯಾಗ್ ಮಾಡಿದ್ದಾರೆ.
ಭಾರತ್ ಜೋಡೊ ಯಾತ್ರೆಯ ಯಶಸ್ಸು ಆಡಳಿತಾರೂಢ ಬಿಜೆಪಿ ಪಕ್ಷದ ನಿದ್ದೆಗೆಡಿಸಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಜನಪ್ರಿಯತೆ ಅವರಲ್ಲಿ ಅಸೂಯೆ ಹುಟ್ಟಿಸಿದೆ. ಇವರಿಗೆಲ್ಲ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.