ADVERTISEMENT

ಹೊಳಲ್ಕೆರೆ ತಾ.ಚಿತ್ರಹಳ್ಳಿ: ಹೆರಿಗೆ ನೋವು, ನಡುರಸ್ತೆಯಲ್ಲಿಯೇ ಹೆಣ್ಣು ಶಿಶು ಜನನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 14:28 IST
Last Updated 8 ಜನವರಿ 2019, 14:28 IST
ನಡು ರಸ್ತೆಯಲ್ಲಿ ಮಹಿಳೆಯರು ಬಟ್ಟೆಯನ್ನು ಅಡ್ಡ ಹಿಡಿದು ಹೆರಿಗೆ ಮಾಡಿಸಿದ್ದಾರೆ.
ನಡು ರಸ್ತೆಯಲ್ಲಿ ಮಹಿಳೆಯರು ಬಟ್ಟೆಯನ್ನು ಅಡ್ಡ ಹಿಡಿದು ಹೆರಿಗೆ ಮಾಡಿಸಿದ್ದಾರೆ.   

ಚಿತ್ರದುರ್ಗ: ಆರೋಗ್ಯ ಕೇಂದ್ರದಿಂದ ಮನೆಗೆ ಮರಳುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡು ನಡು ರಸ್ತೆಯಲ್ಲಿಯೇ ಶಿಶುವಿಗೆ ಜನ್ಮನೀಡಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ಸೋಮವಾರ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೆರಿಗೆಯ ಬಳಿಕ ಬಾಣಂತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಹೆಣ್ಣು ಶಿಶು ಆರೋಗ್ಯವಾಗಿದ್ದಾರೆ.

ಚೌಡಪ್ಪ ಅವರ ಪತ್ನಿ ಗಂಗಮಾಳಮ್ಮ ತುಂಬು ಗರ್ಭಿಣಿ. ವೈದ್ಯರನ್ನು ಕಾಣಲು ಅವರು ಚಿತ್ರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಗರ್ಭಿಣಿಯ ಆರೋಗ್ಯವನ್ನು ಪರಿಶೀಲಿಸದ ವೈದ್ಯ ಡಾ.ಮೊಹಮ್ಮದ್‌, ಆಸ್ಪತ್ರೆಯಿಂದ ಹೊರನಡೆದಿದ್ದಾರೆ. ಇದರಿಂದ ಬೇಸರಗೊಂಡು ಮನೆಗೆ ಮರಳುವ ಸಂದರ್ಭದಲ್ಲಿ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ.

ADVERTISEMENT

ನಡು ರಸ್ತೆಯಲ್ಲಿಯ ಕುಳಿತುಕೊಂಡು ಕಿರುಚಿಕೊಂಡಿದ್ದಾರೆ. ಸಮೀಪದಲ್ಲಿದ್ದ ಮಹಿಳೆಯರು ಧಾವಿಸಿ ಪರಿಶೀಲಿದಾಗ ಶಿಶುವಿನ ತಲೆ ಗರ್ಭದಿಂದ ಹೊರಗೆ ಬಂದಿದ್ದು ಗೊತ್ತಾಗಿದೆ. ಮಣ್ಣಿನ ರಸ್ತೆಯಲ್ಲಿ ಮಲಗಿದ ಗರ್ಭಿಣಿಯ ಸುತ್ತ ಸೀರೆಯ ಪರದೆ ನಿರ್ಮಿಸಿ ಹೆರಿಗೆಗೆ ಆಸರೆಯಾಗಿದ್ದಾರೆ. ಬಳಿಕ 108 ಆಂಬುಲೆನ್ಸ್‌ನಲ್ಲಿ ಅವರನ್ನು ಹೊರಕೆರೆಪುರದ ಆಸ್ಪತ್ರೆಗೆ ಸಾಗಿಸಲಾಗಿದೆ.

‘ವೈದ್ಯರ ನಿರ್ಲಕ್ಷ್ಯದಿಂದ ಈ ಲೋಪ ಆಗಿರುವುದು ನಿಜ. ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ವೈದ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಶಿಫಾರಸು ಮಾಡಿದ್ದಾನೆ’ ಎಂದು ಹೊಳಲ್ಕೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಯಸಿಂಹ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.