ಮಂಡ್ಯ: ಪಾಂಡವಪುರ ತಾಲ್ಲೂಕು ಚಿನಕುರಳಿ ಭಾಗದಲ್ಲಿ ದೊರೆಯುವ ಚಪ್ಪಡಿ ಕಲ್ಲಿಗೆ ರಾಜ್ಯದಲ್ಲಿ ಅಪಾರ ಬೇಡಿಕೆ ಇದೆ. ಅದಕ್ಕೆ ಅನುಗುಣವಾಗಿ ಕಲ್ಲು ಪೂರೈಸಲು ಗಣಿ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಗಣಿ ಚಟುವಟಿಕೆ ನಡೆಸುತ್ತಿದ್ದಾರೆ.
ಗ್ರಾನೈಟ್‌ನಷ್ಟೇ ಹೊಳಪು ಹೊಂದಿರುವ ಈ ಭಾಗದ ಚಪ್ಪಡಿ ಕಲ್ಲು, ದಿಂಡುಗಲ್ಲು ಗಣಿ ಮಾಲೀಕರಿಗೆ ಆದಾಯದ ದೊಡ್ಡ ಮೂಲವಾಗಿದೆ. ಬೇರೆ ಭಾಗದ ಕಲ್ಲಿಗಿಂತ ಈ ಕಲ್ಲಿನ ಬೆಲೆ ದುಬಾರಿಯಾಗಿದ್ದರೂ ಬೇಡಿಕೆ ಕಡಿಮೆಯಾಗಿಲ್ಲ.
ಚಿನಕುರಳಿ ಆಸುಪಾಸಿನಲ್ಲಿರುವ ‘ಗ್ರಾನೈಟಿಕ್ ನೈಸ್’ ಶಿಲಾ ನಿಕ್ಷೇಪ ಕಟ್ಟಡ ಕಾಮಗಾರಿಗೆ ಸೂಕ್ತವಾಗಿದೆ ಎಂದು ಭೂವಿಜ್ಞಾನಿಗಳು ಹೇಳಿರುವುದರಿಂದ, ಗಣಿ ಕಂಪನಿಗಳು ತಮ್ಮ ಬಲಿಷ್ಠ ಬಾಹುಗಳನ್ನು ಚಾಚಿಕೊಂಡಿವೆ. 3–4 ಎಕರೆಗೆ ಅನುಮತಿ ಪಡೆದು ನೂರಾರು ಎಕರೆಯಲ್ಲಿ ಚಟುವಟಿಕೆ ನಡೆದಿದೆ.
ಮಂಡ್ಯ ರಿಪಬ್ಲಿಕ್: ಮೈಸೂರು–ಮಂಗಳೂರು ರಾಜ್ಯ ಹೆದ್ದಾರಿಯಲ್ಲಿರುವ ಚಿನಕುರುಳಿ ಪಟ್ಟಣ ಕಲ್ಲು ಗಣಿ ಮಾಲೀಕರ ಊರು ಎಂದೇ ಪ್ರಸಿದ್ಧ. ಕೆಲವರು ‘ರಿಪಬ್ಲಿಕ್ ಆಫ್ ಮಂಡ್ಯ’ ಎಂದೇ ಗುರುತಿಸುತ್ತಾರೆ. ಚಿನಕುರುಳಿ ಬಳಿ ಗಣಿ ಚಟುವಟಿಕೆ ನಡೆಸುತ್ತಿರುವವರಲ್ಲಿ ಬಹುತೇಕರು ಸ್ಥಳೀಯ ಜನಪ್ರತಿನಿಧಿಗಳು.
ಬೇಬಿಬೆಟ್ಟ ಸರ್ವೆ ನಂಬರ್ 1ರಲ್ಲಿ 1,487 ಎಕರೆ, ಹೊನಗಾನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂಬರ್ 127ರಲ್ಲಿ 301 ಎಕರೆ, ಚಿನಕುರಳಿ ವ್ಯಾಪ್ತಿಯ ಸರ್ವೆ ನಂಬರ್ 80ರಲ್ಲಿ 257 ಎಕರೆ, ಕೆ.ಮಲ್ಲೇನಹಳ್ಳಿ ವ್ಯಾಪ್ತಿಯಲ್ಲಿ 270 ಎಕರೆ ಪ್ರದೇಶದಲ್ಲಿ ಗಣಿ ಕಂಪನಿಗಳು ಆವರಿಸಿಕೊಂಡಿವೆ. ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ತಾಲ್ಲೂಕಿನ ಸಾವಿರಾರು ಎಕರೆ ಭೂಪ್ರದೇಶ ಕಲ್ಲು ಗಣಿ ಚಟುವಟಿಕೆಯ ಪಾಲಾಗಿದೆ.
‘ಗಣಿ ಚಟುವಟಿಕೆ ನಿಷೇಧಿಸಬೇಕು ಎಂಬ ನಮ್ಮ ಕೂಗು ಯಾರಿಗೂ ಕೇಳಲಿಲ್ಲ. ಕೆಆರ್‌ಎಸ್‌ಗೆ ಧಕ್ಕೆಯಾಗಿದೆ ಎಂಬುದು ಮುನ್ನೆಲೆಗೆ ಬಂದ ನಂತರ ಹೋರಾಟಕ್ಕೆ ಧ್ವನಿ ಸಿಕ್ಕಿದೆ’ ಎಂದು ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ ಸದಸ್ಯ ಬಿ.ಕುಮಾರ್ ಹೇಳಿದರು.
ಅಕ್ರಮ ಗಣಿ ಮಾಲೀಕರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇಲ್ಲಿಯವರೆಗೆ ₹ 500 ಕೋಟಿವರೆಗೆ ದಂಡ ವಿಧಿಸಿದೆ. ರಾಜಧನ ಸೇರಿ ₹ 800 ಕೋಟಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಾಗಿದೆ. ಆದರೆ, ಈ ತನಕ ಕೇವಲ ₹ 1.50 ಕೋಟಿ ರಾಜಧನ ಸಂಗ್ರಹವಾಗಿದೆ!
ಬೇನಾಮಿ ಹೆಸರಿನಲ್ಲಿ ಪ್ರಭಾವಿಗಳ ಚಟುವಟಿಕೆ
ರಾಮನಗರ: ಸರ್ಕಾರಿ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ ಪ್ರಸ್ತುತ 84 ಕಲ್ಲು ಗಣಿಗಾರಿಕೆ ಕ್ವಾರಿಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಪೈಕಿ 22 ಆಲಂಕಾರಿಕ ಶಿಲೆಗಳನ್ನು ಹೊಂದಿರುವ ಗಣಿಗಳೂ ಸೇರಿವೆ. ಅಲ್ಲದೆ 53 ಕ್ರಷರ್‌ಗಳೂ ಇವೆ.
ಸಾವಿರಾರು ಎಕರೆಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದರೂ ರಾಜಧನ ಸಂಗ್ರಹದಲ್ಲಿ ಅಧಿಕಾರಿಗಳು ಹಿಂದೆ ಬಿದ್ದಿದ್ದಾರೆ. ರಾಮನಗರ ಜಿಲ್ಲಾ ಖನಿಜ ಫೌಂಡೇಶನ್ ಟ್ರಸ್ಟ್‌ಗೆ 2016–17ರಿಂದ 2020–21ರವರೆಗೆ ಕೇವಲ ₹ 31.8 ಕೋಟಿಯಷ್ಟೇ ಸಂಗ್ರಹವಾಗಿದೆ.
ಚಾಮರಾಜನಗರ ಜಿಲ್ಲೆಯು ಕರಿ ಕಲ್ಲಿಗೆ (ಗ್ರಾನೈಟ್) ಹೆಸರುವಾಸಿಯಾಗಿದೆ. ಇಲ್ಲಿಯೂ ಅಕ್ರಮ ಗಣಿಗಾರಿಕೆ ಸದ್ದಿಲ್ಲದೇ ನಡೆಯುತ್ತಿದೆ. ಗೋಮಾಳ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿರುವ ಬೆಟ್ಟ ಗುಡ್ಡಗಳು ನಲುಗಿವೆ.
ಶಾಸಕರು, ಪ್ರಭಾವಿಗಳು, ರಾಜಕೀಯ ಮುಖಂಡರು, ಅವರ ಬೆಂಬಲಿಗರೇ ಗಣಿಗಳ ಮಾಲೀಕರು. ಮೇಲ್ನೋಟಕ್ಕೆ ಎಲ್ಲವೂ ನಿಯಮಗಳಂತೆಯೇ ನಡೆಯುತ್ತಿದೆ ಎಂದು ಕಂಡು ಬಂದರೂ, ದಾಖಲೆಗಳಲ್ಲಿ 'ನಿಷ್ಕ್ರಿಯ' ವಾಗಿರುವ ಗಣಿಗಳು ಈಗಲೂ ಸಕ್ರಿಯವಾಗಿವೆ.
ಬೇಬಿಬೆಟ್ಟದಿಂದ ಮೈಸೂರಿಗೆ ಸಾಗಣೆ ವೆಚ್ಚ ಸೇರಿ ಕಲ್ಲುಗಳ ದರ
* ಚಪ್ಪಡಿ: 1 ಚದರ ಅಡಿ: ₹ 150– ₹ 200
* 1 ಕಲ್ಲು ಕಂಬ (6 ಅಡಿ): ₹ 300– 350
* ಸಾವಿರ ಸೈಜ್‌ಗಲ್ಲು: ₹ 15,000– 20,000
* 1 ಟನ್ ಬೇಬಿ ಜಲ್ಲಿ: ₹ 1,000–1,200
* 1 ಟನ್ ಎಂ.ಸ್ಯಾಂಡ್: ₹ 1,000– 1,500
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.