ADVERTISEMENT

ಹೆಚ್ಚುವರಿ ಅಬಕಾರಿ ಶುಲ್ಕ ವಿನಾಯ್ತಿಗೆ ಒತ್ತಾಯ: ಸಿಎಂ ಭೇಟಿಯಾದ ವರ್ತಕರ ನಿಯೋಗ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 13:38 IST
Last Updated 10 ಜೂನ್ 2020, 13:38 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ರಾಜ್ಯ ವೈನ್‌ ವರ್ತಕರ ನಿಯೋಗ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ರಾಜ್ಯ ವೈನ್‌ ವರ್ತಕರ ನಿಯೋಗ   

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಮದ್ಯ ಮಾರಾಟಗಾರರಿಗೆ ಎರಡು ತಿಂಗಳ ಸನ್ನದು ಶುಲ್ಕದಲ್ಲಿ ವಿನಾಯ್ತಿ ಕೊಡಲು ಸಾಧ್ಯವಿಲ್ಲದಿದ್ದರೆ ಹೆಚ್ಚುವರಿ ಅಬಕಾರಿ ಶುಲ್ಕದಲ್ಲಿ ಶೇ.15ರಷ್ಟು ಬಿಡಬೇಕು ಎಂದು ರಾಜ್ಯ ವೈನ್‌ ವರ್ತಕರ ಒಕ್ಕೂಟದ ನಿಯೋಗ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.

ರಾಜ್ಯ ವೈನ್‌ ವರ್ತಕರ ಸಂಘದ ಅಧ್ಯಕ್ಷ ಗುರುಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್‌ ಹೆಗ್ಡೆ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನು ಬುಧವಾರ ಭೇಟಿ ಮಾಡಿದ ನಿಯೋಗ ಹೆಚ್ಚುವರಿ ಅಬಕಾರಿ ಶುಲ್ಕದಲ್ಲಿ ಶೇ 15ರಷ್ಟು ವಿನಾಯ್ತಿ ನೀಡಿದರೆ ಸರ್ಕಾರಕ್ಕೆ ಕೇವಲ ₹ 75 ಕೋಟಿ ಹೊರೆ ಆಗಲಿದೆ ಎಂದು ವಿವರಿಸಿತು.

ಮದ್ಯ ವರ್ತಕರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ವ್ಯಾಪಾರ ಮಾಮೂಲು ಸ್ಥಿತಿಗೆ ಮರಳಲು ಇನ್ನೂ 6 ತಿಂಗಳ ಹಿಡಿಯಬಹುದು. ಈ ಹಿನ್ನೆಲೆಯಲ್ಲಿ ಸನ್ನದು ಶುಲ್ಕ ಪಾವತಿಗೆ ಕನಿಷ್ಠ ಮೂರು ಕಂತುಗಳನ್ನಾದರೂ ನೀಡಬೇಕು. ಸದ್ಯ ಎರಡು ಕಂತುಗಳನ್ನು ಮಾತ್ರ ಕೊಡಲಾಗಿದೆ ಎಂದು ಆಗ್ರಹಿಸಿತು.

ADVERTISEMENT

ಬಾರ್‌ಗಳಲ್ಲಿ ಮದ್ಯದ ಜತೆ ಆಹಾರ ಸೇವಿಸಲು ಅವಕಾಶ ಕೊಡಬೇಕು. ಈಗ ಮದ್ಯ ಮತ್ತು ಆಹಾರ ಎರಡನ್ನು ಪ್ರತ್ಯೇಕಗೊಳಿಸಲಾಗಿದೆ. ಅಲ್ಲದೆ, ವಿಸ್ಕಿ, ಬಿಯರ್‌ ಮತ್ತು ರಂ ಅನ್ನು ಗರಿಷ್ಠ ಚಿಲ್ಲರೆ ದರಗಳಲ್ಲಿ (ಎಂಆರ್‌ಪಿ) ಮಾರಾಟ ಮಾಡಲು ಅನುಮತಿ ಕೊಡಬೇಕು ಎಂದು ಆಗ್ರಹಿಸಲಾಗಿದೆ.

ಸಚಿವ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಒಕ್ಕೂಟದ ಬೆಂಗಳೂರು ಅಧ್ಯಕ್ಷ ಲೋಕೇಶ್‌, ಉಪಾಧ್ಯಕ್ಷ ಕರುಣಾಕರ ಹೆಗ್ಡೆ ಮತ್ತು ಉಡುಪಿ ಪದಾಧಿಕಾರಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.