ಬೆಂಗಳೂರು: ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು. ಇದು ನಮ್ಮ ಸಮುದಾಯದ ಬಹಳ ದಿನಗಳ ಬೇಡಿಕೆಯಾಗಿದೆ. ಈ ಕುರಿತು ನಾವು ಹೋರಾಟ ರೂಪಿಸುತ್ತಿದ್ದೇವೆ ಎಂದು ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.
ಎಸ್.ಟಿ ಹೋರಾಟ ಸಮಿತಿಯಿಂದ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಈ ತಿಂಗಳ 11ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ಹೋರಾಟದ ಬಗ್ಗೆ ರೂಪುರೇಷೆಯನ್ನು ರಚಿಸಲಾಗುವುದು. ಈಗ ಎಸ್‌ಟಿಗೆ ಸೇರ್ಪಡೆಯಾಗಿರುವ ಸಮುದಾಯಗಳಿಗೆ ನಮ್ಮಿಂದ ಯಾವುದೇ ತೊಂದರೆಯಾಗುವುದಿಲ್ಲ. ಎಲ್ಲ ಹಿಂದುಳಿದ ವರ್ಗಗಳನ್ನ ಒಟ್ಟಿಗೆ ಮೇಲಕ್ಕೆತ್ತಬೇಕೆಂಬುದೇ ನಮ್ಮ ಉದ್ದೇಶ ಎಂದರು.
ಈಗ ಎಸ್‌ಟಿ ಸಮುದಾಯಕ್ಕೆ ಸೇರಿರುವ ಸಮುದಾಯಗಳು ಶೇ.೩ರ ಬದಲಿಗೆ 7% ಮೀಸಲಾತಿ ಕೇಳುತ್ತಿದ್ದಾರೆ. ಅದಕ್ಕೆ ನಮ್ಮ ಸಹಮತವಿದೆ ಎಂದೂ ಹೇಳಿದರು.
ಸಮಾಜದ ಮುಖಂಡ ಎಚ್.ಎಂ ರೇವಣ್ಣ ಮಾತನಾಡಿ, ಮೊದಲಿನಿಂದಲೂ ಎಸ್‌ಟಿ ಸಮುದಾಯಕ್ಕೆ ಸೇರಿಸುವಂತೆ ಹೋರಾಟ ನಡೆಯುತ್ತಿದೆ. ನಮ್ಮ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಆಗಿರಲಿಲ್ಲ. ಈಗ ಸಚಿವ ಕೆ.ಎಸ್ ಈಶ್ವರಪ್ಪ ಇದರ ನೇತೃತ್ವ ವಹಿಸಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ನಮ್ಮ ಹಕ್ಕು ಪಡೆಯಲು ವೇದಿಕೆ ಮಾಡಿಕೊಂಡಿದ್ದೇವೆ ಎಂದರು.
ನಮ್ಮ ಬೇಡಿಕೆಯನ್ನು ಸರ್ಕಾರದ ಪರಿಗಣಿಸಬೇಕು. ಪಕ್ಷಾತೀತವಾಗಿ ಇಲ್ಲಿಯವರೆಗೂ ಸಂಘಟಿತವಾಗಿರಲಿಲ್ಲ. ಜಯ ಸಿಕ್ಕೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದೂ ಹೇಳಿದರು.
ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಸಚಿವ ಕೆ.ಎಸ್ ಈಶ್ವರಪ್ಪ,, ಮಾಜಿ ಸಂಸದ ವಿರೂಪಾಕ್ಷಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.