ADVERTISEMENT

200ನೇ ದಿನಕ್ಕೆ ಕಾಲಿಟ್ಟ ಹೋರಾಟ: ಅ. 9ಕ್ಕೆ ರಾಜಧಾನಿ ಚಲೋಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 19:49 IST
Last Updated 28 ಆಗಸ್ಟ್ 2022, 19:49 IST
ಬೆಂಗಳೂರಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿದರು. (ಎಡದಿಂದ) ಛಲವಾದಿ ಮಹಾಸಂಸ್ಥಾನದ ಬಸವನಾಗಿದೇವ ಸ್ವಾಮೀಜಿ, ಮೇದಾರ ಗುರುಪೀಠದ ಬಸವ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬಂಜಾರ ಗುರುಪೀಠದ ಪೀಠಾಧ್ಯಕ್ಷ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಇದ್ದರು -  ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿದರು. (ಎಡದಿಂದ) ಛಲವಾದಿ ಮಹಾಸಂಸ್ಥಾನದ ಬಸವನಾಗಿದೇವ ಸ್ವಾಮೀಜಿ, ಮೇದಾರ ಗುರುಪೀಠದ ಬಸವ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬಂಜಾರ ಗುರುಪೀಠದ ಪೀಠಾಧ್ಯಕ್ಷ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಇದ್ದರು -  ಪ್ರಜಾವಾಣಿ ಚಿತ್ರ   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹಿಸಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿಅ. 9ರಂದು ‘ರಾಜಧಾನಿ ಚಲೋ’ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿರುವ ಧರಣಿ ಭಾನುವಾರಕ್ಕೆ 200 ದಿನಗಳನ್ನು ಪೂರೈಸಿದ್ದರಿಂದ ಸಭೆ ನಡೆಸಿದ ವಿವಿಧ ಮಠಾಧೀಶರು, ಮುಖಂಡರು ಈ ನಿರ್ಣಯ ಕೈಗೊಂಡರು.

‘ಕರ್ನಾಟಕ ಸ್ವಾಭಿಮಾನಿ ಎಸ್‌ಸಿ, ಎಸ್‌ಸಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ’ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದರು.

ADVERTISEMENT

ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಪ್ರಮಾಣ ಕ್ರಮವಾಗಿ ಶೇ 15 ರಿಂದ ಶೇ 17ಕ್ಕೆ ಹಾಗೂ ಶೇ 3ರಿಂದ ಶೇ 7ಕ್ಕೆ ‌ಹೆಚ್ಚಿಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿ ಎರಡು ವರ್ಷ ಕಳೆದರೂ ಸರ್ಕಾರ ಅನುಷ್ಠಾನಕ್ಕೆ ಕ್ರಮಕೈಗೊಂಡಿಲ್ಲ ಎಂಬುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು, ‘ರಾಜ್ಯದ 224 ಕ್ಷೇತ್ರದಲ್ಲೂ ಪರಿಶಿಷ್ಟರಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ101 ಒಳಪಂಗಡಗಳು, ಪರಿಶಿಷ್ಟ ಪಂಗಡದಲ್ಲಿ 50 ಒಳಪಂಗಡಗಳಿದ್ದು ಅಂದಾಜು 1.50 ಕೋಟಿ ಜನಸಂಖ್ಯೆ ಇದೆ. ಮುಂದಿನ ಚುನಾವಣೆಯಲ್ಲಿ ಯಾರನ್ನೂ ಬೇಕಾದರು ಗೆಲ್ಲಿಸುವ, ಸೋಲಿಸುವ ತಾಕತ್ತು ಸಮುದಾಯಕ್ಕಿದೆ’ ಎಂದರು.

‘ಜನಸಂಖ್ಯೆ ಆಧರಿಸಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಪ್ರತಿಭಟನೆಯ 108ನೇ ದಿನ ಮುಖ್ಯಮಂತ್ರಿ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ‘ಸಂವಿಧಾನದ ಅಡಿಯಲ್ಲೇ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರೂ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪರಿವರ್ತನೆ ವೇದಿಕೆ ಅಧ್ಯಕ್ಷ ಬಿ.ಗೋಪಾಲ್‌ ಮಾತನಾಡಿ, ‘ವಾಲ್ಮೀಕಿ ಜಯಂತಿ ದಿನವೇ ರಾಜಧಾನಿ ಚಲೋ ಹೋರಾಟ ನಡೆಯಲಿದೆ’ ಎಂದರು.

*
ಕೋಮುವಾದ, ಜಾತಿವಾದಕ್ಕೆ ಕಡಿವಾಣ ಹಾಕಿ ತಳ ಹಾಗೂ ಬಲಹೀನ ಸಮುದಾಯಕ್ಕೆ ಸರ್ಕಾರವು ಸೌಲಭ್ಯ ಕಲ್ಪಿಸಬೇಕು.
-ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.