ADVERTISEMENT

‘ಬುಲ್ಡೋಜರ್’ ಕಾನೂನಿಗೆ ಕಟೀಲ್, ಅಶೋಕ ಆಗ್ರಹ

ಗಲಭೆಕೋರರ ಸೂರು ನಾಶ ಕುರಿತು ಸಿ.ಎಂ ಜತೆ ಚರ್ಚೆ: ಕಟೀಲ್, ಅಶೋಕ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 18:17 IST
Last Updated 23 ಏಪ್ರಿಲ್ 2022, 18:17 IST
   

ಬೆಂಗಳೂರು: ಗಲಭೆಕೋರರ ಆಸ್ತಿಗಳನ್ನು ‘ಬುಲ್ಡೋಜರ್‌’ಗಳ ಮೂಲಕ ಧ್ವಂಸಗೊಳಿಸುವ ಕ್ರಮವನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂಬ ಆಗ್ರಹ ರಾಜ್ಯದ ಬಿಜೆಪಿ ನಾಯಕರಿಂದಲೇ ವ್ಯಕ್ತವಾಗಿದೆ.

ಇಂತಹ ಕಾನೂನು ಜಾರಿಗೊಳಿಸುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದು, ಕಂದಾಯ ಸಚಿವ ಆರ್‌. ಅಶೋಕ ಅವರೂ ಸಹಮತ ವ್ಯಕ್ತಪಡಿಸಿದರು. ಬಿಜೆಪಿ ಆಡಳಿತದಲ್ಲಿರುವ ಉತ್ತರಪ್ರದೇಶ, ಗುಜರಾತ್‌ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೈಗೊಳ್ಳುತ್ತಿರುವ ಕಾರ್ಯಾಚರಣೆ ರಾಜ್ಯದಲ್ಲೂ ಆರಂಭವಾಗಬೇಕು ಎಂದು ಉಭಯ ನಾಯಕರು ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ನಳಿನ್‌, ‘ಈಗ ನಾವು ಕಾಣುತ್ತಿರುವ ಗಲಭೆಗಳ ಹಿಂದೆ ರಾಜಕೀಯ ಕೈವಾಡವಿದೆ. ಚುನಾವಣಾ ವರ್ಷವಾಗಿರುವುದರಿಂದ ಇನ್ನೂ ಅನೇಕ ಘಟನೆಗಳು ನಡೆಯಬಹುದು. ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚುವುದು, ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುವುದು ಭಯೋತ್ಪಾದನೆಗೆ ಸಮನಾದುದು. ಈ ರೀತಿಯ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಅಗತ್ಯ’ ಎಂದರು.

ADVERTISEMENT

‘ಗಲಭೆಕೋರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ನೆಲಸಮಗೊಳಿಸುವುದಕ್ಕೆ ಅವಕಾಶ ಕಲ್ಪಿಸುವಂತಹ ಕಠಿಣ ಕಾನೂನು ಬೇಕಿದೆ. ಒಂದು ಪಕ್ಷವಾಗಿ ಇದನ್ನೇ ನಾವು ಸರ್ಕಾರಕ್ಕೆ ಹೇಳುತ್ತೇವೆ’ ಎಂದು ತಿಳಿಸಿದರು.

‘ಗಲಭೆಕೋರರರಿಗೆ ಸ್ವಂತ ಸೂರು ಇಲ್ಲದಂತೆ ಮಾಡಬೇಕು. ಉತ್ತರ ಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಬಿಗಿಯಾದ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಅಶೋಕ ಹೇಳಿದರು.

‘ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ. ಅವರಲ್ಲಿ ಕೆಟ್ಟವರೂ ಇದ್ದಾರೆ. ಐಎಸ್‌ಐ ಉಗ್ರರ ಜತೆ ಸಂಪರ್ಕ ಇರಿಸಿಕೊಂಡವರು, ಪಾಕಿಸ್ತಾನಕ್ಕೆ ಜೈಕಾರಹಾಕುವವರೂ ಇದ್ದಾರೆ. ಹುಬ್ಬಳ್ಳಿ ಗಲಭೆಗೂ ವಿದೇಶಿ ನಂಟು ಇರುವಂತೆ ಕಾಣುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳ ಮಾದರಿಯಲ್ಲಿ ಗಲಭೆ ಸೃಷ್ಟಿಸುವವರ ಅಕ್ರಮ ಆಸ್ತಿಗಳನ್ನು ಪತ್ತೆ
ಮಾಡಿ, ಧ್ವಂಸಗೊಳಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುತ್ತೇನೆ’ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಇಂಧನ ಸಚಿವ ವಿ. ಸುನಿಲ್‌ಕುಮಾರ್ ಹಾಗೂ ಮೈಸೂರು– ಕೊಡಗು ಸಂಸದ ಪ್ರತಾಪಸಿಂಹ ಕೂಡ ರಾಜ್ಯದಲ್ಲೂ ‘ಬುಲ್ಡೋಜರ್‌’ ಕಾನೂನು ಜಾರಿಗೆ ತರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

‘ರಾಕ್ಷಸಿ ಸಮುದಾಯದ ಬಗ್ಗೆ ಎಚ್ಚರ ಇರಲಿ’

‘ಮನುಕುಲದ ವಿರೋಧಿಗಳು ಹೆಚ್ಚಾಗಿದ್ದಾರೆ. ಪ್ರಾಣಿಗಳನ್ನಲ್ಲ, ಮನುಷ್ಯರನ್ನೇ ಕಡಿದು ತಿನ್ನುವ ರಾಕ್ಷಸಿ ಭಾವನೆ ಇರುವ ಸಮುದಾಯ ನಮ್ಮ ಮಧ್ಯೆ ಇರುವಾಗ, ನಾವು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು’ ಎಂದುಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅನಂತಕುಮಾರ್‌ ಪ್ರತಿಷ್ಠಾನ ಮತ್ತು ಅದಮ್ಯ ಚೇತನದ ವತಿಯಿಂದ ಶನಿವಾರ ಆಯೋಜಿಸಿದ್ದ ದೇಶ ಮೊದಲು ಸಂವಾದದ ‘ನಮ್ಮ ಕಾಶ್ಮೀರ- ನಮ್ಮ ಹೊಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಧಾರವಾಡದ ನುಗ್ಗಿಕೇರಿಯಲ್ಲಿ ಕಲ್ಲಂಗಡಿ ಹಾಳು ಮಾಡಿದ ವಿಚಾರ ರಾಜ್ಯದಾದ್ಯಂತ ಚರ್ಚೆಯಾಯಿತು. ಆದರೆ, ಹುಬ್ಬಳ್ಳಿ ಗಲಭೆಯನ್ನು ಸಕಾಲದಲ್ಲಿ ನಿಯಂತ್ರಿಸದೇ ಹೋಗಿದ್ದರೆ, ಇಡೀ ಊರು ಹೊತ್ತಿ ಉರಿಯುತ್ತಿತ್ತು. ಈ ಬಗ್ಗೆ ಹೆಚ್ಚು ಚರ್ಚೆ ಆಗಲೇ ಇಲ್ಲ. ಆ ಸಮುದಾಯದ ಎಲ್ಲರೂ ಕೆಟ್ಟವರು ಎಂದು ನಾನು ಹೇಳುವುದಿಲ್ಲ. ಕೆಲವು ಮತಾಂಧ ಶಕ್ತಿಗಳ ಕುಮ್ಮಕ್ಕು ಇದರ ಹಿಂದೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.