ADVERTISEMENT

ಜಾತಿ ಕಾರಣಕ್ಕೆ ಆರ್‌ಎಸ್‌ಎಸ್‌ ಕಚೇರಿ ಪ್ರವೇಶ ನಿರಾಕರಣೆ: ಗೂಳಿಹಟ್ಟಿ ಶೇಖರ್‌

ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಆರೋಪ: ಸ್ಪಷ್ಟನೆ ನೀಡುವಂತೆ ಬಿ.ಎಲ್‌.ಸಂತೋಷ್‌ಗೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 15:21 IST
Last Updated 5 ಡಿಸೆಂಬರ್ 2023, 15:21 IST
<div class="paragraphs"><p>ಗೂಳಿಹಟ್ಟಿ ಶೇಖರ್‌</p></div>

ಗೂಳಿಹಟ್ಟಿ ಶೇಖರ್‌

   

ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂಬುದು ಖಚಿತವಾಗಿದ್ದರಿಂದ ಮಹಾರಾಷ್ಟ್ರದಲ್ಲಿನ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹೆಡಗೇವಾರ್‌ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬಲ್ಲಿರಾ? ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಪ್ರಶ್ನಿಸಿದ್ದಾರೆ.

ನಾಗಪುರದ ಆರ್‌ಎಸ್‌ಎಸ್‌ ಕಚೇರಿ ಭೇಟಿಯ ಸಂದರ್ಭದಲ್ಲಿ ಉಂಟಾದ ಕಹಿ ಅನುಭವಕ್ಕೆ ಸಂಬಂಧಿಸಿದ ಹೇಳಿಕೆಯನ್ನು ಆಡಿಯೊ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಚುನಾವಣೆ ಘೋಷಣೆಯಾಗುವುದಕ್ಕೂ ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದೆ. ಪರಿಶಿಷ್ಟ ಜಾತಿಗೆ ಸೇರಿದವನಾದರೂ ಹಿಂದುತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಖುಷಿಯಿಂದ ಅಲ್ಲಿಗೆ ತೆರಳಿದ್ದೆ. ಆದರೆ, ಹೆಡಗೇವಾರ್‌ ವಸ್ತುಸಂಗ್ರಹಾಲಯ ಪ್ರವೇಶದ ಸಂದರ್ಭದಲ್ಲಿ ಕಹಿ ಅನುಭವ ಉಂಟಾಯಿತು’ ಎಂದು ಬೇಸರ ಹೊರಹಾಕಿದ್ದಾರೆ.

‘ಮ್ಯೂಸಿಯಂ ವೀಕ್ಷಣೆಗೆ ಬರುವವರ ಮಾಹಿತಿಯನ್ನು ಪ್ರವೇಶದ್ವಾರದಲ್ಲಿ ಸಂಗ್ರಹಿಸಲಾಗುತ್ತಿತ್ತು. ಪುಸ್ತಕದಲ್ಲಿ ಹೆಸರು ನೋಂದಾಯಿಸಿ ಒಳಗೆ ಹೆಜ್ಜೆ ಇಡುತ್ತಿದ್ದಾಗ ವ್ಯಕ್ತಿಯೊಬ್ಬರು ತಡೆದರು. ಪರಿಶಿಷ್ಟ ಜಾತಿಗೆ ಸೇರಿದವರಿಗೆ ಪ್ರವೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ನನ್ನೊಂದಿಗೆ ಇದ್ದ ಮೋಹನ್‌ ವೈದ್ಯ ಹಾಗೂ ಮಂಜು ಎಂಬುವರು ಮಾತ್ರ ಒಳಗೆ ಹೋದರು. ನಾನು ಹೊರಗೆ ಕಾಯುತ್ತ ಕುಳಿತುಕೊಳ್ಳಬೇಕಾಯಿತು’ ಎಂದು ಹೇಳಿದ್ದಾರೆ.

‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪರಿಶಿಷ್ಟ ಜಾತಿಗೆ ಸೇರಿದ ಎ.ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಇಲ್ಲಿಗೆ ಪ್ರವೇಶ ಪಡೆದಿದ್ದಾರೆ ಎಂಬ ಅನುಮಾನ ಇದೆ. ನನ್ನನ್ನು ಒಳಗೆ ಬಿಡದಿರುವ ಬಗ್ಗೆ ಬಿ.ಎಲ್‌.ಸಂತೋಷ್‌ ಅವರು ಸ್ಪಷ್ಟನೆ ನೀಡಬಲ್ಲಿರಾ’ ಎಂದು ಪ್ರಶ್ನಿಸಿದ್ದಾರೆ.

ಗೂಳಿಹಟ್ಟಿ ಶೇಖರ್ ಪ್ರತಿಕ್ರಿಯೆ

‘ದೇಶ ಸೇವೆ ಮಾಡುತ್ತಾರೆ ಎಂಬ ಕಾರಣಕ್ಕೆ ಆರ್‌ಎಸ್‌ಎಸ್‌ ನಾಯಕರ ಮೇಲೆ ಅಪಾರ ಗೌರವವಿತ್ತು. ಮ್ಯೂಸಿಯಂ ಪ್ರವೇಶ ನಿರಾಕರಿಸಿದ್ದು ಮನಸಿಗೆ ಘಾಸಿಯುಂಟು ಮಾಡಿತ್ತು. ರಾಜಕೀಯ ಪಕ್ಷದ ಮುಲಾಜಿಗೆ ಒಳಗಾಗಿ ಬಹಿರಂಗವಾಗಿ ಅಭಿಪ್ರಾಯ ಹಂಚಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಅನೇಕ ಮುಖಂಡರ ಬಳಿ ಖಾಸಗಿಯಾಗಿ ಪ್ರಸ್ತಾಪ ಮಾಡಿದ್ದೆ. ಯಾರೊಬ್ಬರೂ ಸರಿಯಾಗಿ ಸ್ಪಂದಿಸದ ಕಾರಣಕ್ಕೆ ಬಹಿರಂಗಪಡಿಸಿದ್ದು, ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ಇದು ನನ್ನ ಕಹಿ ಅನುಭವ’ ಎಂದು ಗೂಳಿಹಟ್ಟಿ ಶೇಖರ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.