ಬೆಂಗಳೂರು: ಬೆಂಗಳೂರಿನ ಗಂಗೇನಹಳ್ಳಿಯ (ಈಗಿನ ಗಂಗಾನಗರ) 1 ಎಕರೆ 11 ಗುಂಟೆ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಿದರು.
ವಿಚಾರಣೆಗ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ಕುಮಾರಸ್ವಾಮಿಗೆ ಸಮನ್ಸ್ ನೀಡಿದ್ದರು. ಶುಕ್ರವಾರ ಸಂಜೆ 5.40ಕ್ಕೆ ತನಿಖಾಧಿಕಾರಿ ಬಸವರಾಜ ಮಗ್ದುಂ ಎದುರು ವಿಚಾರಣೆಗೆ ಹಾಜರಾದರು.
‘ಕುಮಾರಸ್ವಾಮಿ ಅವರನ್ನು ಒಂದೂ ಮುಕ್ಕಾಲು ತಾಸು ವಿಚಾರಣೆಗೆ ಒಳಪಡಿಸಲಾಗಿತ್ತು. ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲವು ಪ್ರಶ್ನೆಗಳಿಗೆ, ‘ನನಗೇನೂ ಗೊತ್ತಿಲ್ಲ’ ಎಂದರು’ ಎಂದು ಮೂಲಗಳು ತಿಳಿಸಿವೆ.
2006–07ರ ಅವಧಿಯಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಡಿನೋಟಿಫೈಗೆ ಯತ್ನಿಸಿದ ಆರೋಪ ಕುಮಾರಸ್ವಾಮಿ ಅವರ ಮೇಲಿದೆ. ಇದೇ ಜಮೀನನ್ನು, ಆ ಬಳಿಕ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು. ಈ ಜಮೀನನ್ನು ಕುಮಾರಸ್ವಾಮಿ ಅವರ ಅತ್ತೆ (ಅನಿತಾ ಅವರ ತಾಯಿ) ಮತ್ತು ಬಾಮೈದ ಖರೀದಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಯಾವ ತಪ್ಪೂ ಮಾಡಿ ನಾನು ಇಲ್ಲಿಗೆ ಬಂದಿಲ್ಲ. ಲೋಕಾಯುಕ್ತ ಪೊಲೀಸರು ಕರೆದಿದ್ದಕ್ಕೆ ಬಂದಿದ್ದೆ. ಅಧಿಕಾರಿಗಳು ಕೇಳಿದ ಮಾಹಿತಿ ನೀಡಿದ್ದೇನೆ.ಯಾವ ತಪ್ಪೂ ಮಾಡಿ ನಾನು ಇಲ್ಲಿಗೆ ಬಂದಿಲ್ಲ. ಲೋಕಾಯುಕ್ತ ಪೊಲೀಸರು ಕರೆದಿದ್ದಕ್ಕೆ ಬಂದಿದ್ದೆ. ಅಧಿಕಾರಿಗಳು ಕೇಳಿದ ಮಾಹಿತಿ ನೀಡಿದ್ದೇನೆ. -ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.