ADVERTISEMENT

ಡಿ–ನೋಟಿಫೈ: ಬಿ.ಎಸ್. ಯಡಿಯೂರಪ್ಪಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 19:25 IST
Last Updated 18 ಜೂನ್ 2022, 19:25 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ಅಕ್ರಮ ಡಿ-ನೋಟಿಫಿಕೇಷನ್‌ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಕುರಿತಂತೆ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಜಯಂತ ಕುಮಾರ್ ಶನಿವಾರ ಮಾನ್ಯ ಮಾಡಿದರು.

ದೂರುದಾರರ ಪರ ವಕೀಲ ಕೆ.ವಿ. ಧನಂಜಯ ಆಕ್ಷೇಪಣೆ ಸಲ್ಲಿಸಿ, ‘ಜಾಮೀನು ಮಂಜೂರು ಮಾಡಲು ಆದೇಶಿಸುವ ಬಗ್ಗೆ ನಮ್ಮ ಅಭ್ಯಂತರವಿಲ್ಲ’ ಎಂದು ತಿಳಿಸಿದರಲ್ಲದೆ, ಪ್ರಕರಣದ ತ್ವರಿತ ವಿಚಾರಣೆ ನಡೆಯಲು ಆರೋಪಿ ಸಹಕರಿಸುವಂತೆ ಕೋರಿದರು. ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ಸಹಮತ
ವ್ಯಕ್ತಪಡಿಸಿದರು.

ADVERTISEMENT

ಕುಳಿತುಕೊಳ್ಳಿ: ವಿಚಾರಣೆಗೆ ಕೂಗಿದ ತಕ್ಷಣ ಎದ್ದುನಿಂತ ಯಡಿಯೂರಪ್ಪನವರು ಕೆಲ ನಿಮಿಷಗಳ ನಂತರ ಸುಸ್ತಾದಂತೆ ಕಂಡು ಬಂದರಲ್ಲದೆ ನಿಂತುಕೊಂಡಿರಲು ಕಷ್ಟಪಡಲಾರಂಭಿಸಿದರು. ಇದನ್ನು ಗಮನಿಸಿದ ಧನಂಜಯ, ‘ಸ್ವಾಮಿ, ಅರ್ಜಿದಾರರಿಗೆ ಕುಳಿತುಕೊಳ್ಳಲು ಅನುವು ಮಾಡಿಕೊಡಬೇಕು’ ಎಂದರು.

ತಕ್ಷಣ ನ್ಯಾಯಾಧೀಶರ ಸಮ್ಮತಿಯಂತೆ ಕುಳಿತಕೊಂಡ ಯಡಿಯೂರಪ್ಪ ಅವರನ್ನು ಗಮನಿಸಿದ ಜಯಂತ ಕುಮಾರ್, ‘ಏನು ಇಷ್ಟೊಂದು ಜನ ಬಂದಿದ್ದಾರಲ್ಲಾ’ ಎಂದು ಪ್ರಶ್ನಿಸಿದರು.

ಇದಕ್ಕೆ ನಾಗೇಶ್, ‘ಹೌದು ಸ್ವಾಮಿ, ಅರ್ಜಿದಾರರು ಕೊಂಚ ಆತಂಕಗೊಂಡಿರುವುದು ನಿಜ. ಅಂತೆಯೇ ಅವರ ಹಿತೈಷಿಗಳು, ಅಭಿಮಾನಿಗಳು ಮತ್ತು ಕಾನೂನು ವಿದ್ಯಾರ್ಥಿಗಳು ಕಲಾಪ ಅವಲೋಕಿಸಲು ಬಂದಿದ್ದಾರೆ’ ಎಂದರು.

‘ಅರ್ಜಿದಾರರು ವೈಯಕ್ತಿಕ ಕಾರಣಕ್ಕಾಗಿ ವಿದೇಶಕ್ಕೆ ಹೋಗಬೇಕಿದೆ. ಆದ್ದರಿಂದ, ಷರತ್ತಿನಲ್ಲಿ ಈ ಸಂಬಂಧ ಯಾವುದೇ ನಿರ್ಬಂಧವಿಧಿಸಬಾರದು ಎಂದೂ ನಾಗೇಶ್ ಕೋರಿದರು. ಇದಕ್ಕೆ ನ್ಯಾಯಾಧೀಶರು, ‘ಸದ್ಯ ಆ ಬಗ್ಗೆ ದೂರುದಾರರು ಯಾವುದೇ ಪ್ರಸ್ತಾಪ ಮಾಡಿಲ್ಲ’ ಎಂದು ಪ್ರಾಸಿಕ್ಯೂಷನ್‌ ಸಾಕ್ಷ್ಯದ ವಿಚಾರಣೆಯನ್ನುಜುಲೈ 16ಕ್ಕೆ ಮುಂದೂಡಿದರು.

ಬೆಂಗಳೂರಿನ ಬೆಳ್ಳಂದೂರು ಮತ್ತು ದೇವರ ಬೀಸನಹಳ್ಳಿಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ ಆರೋಪವನ್ನು ಯಡಿಯೂರಪ್ಪ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.